ಉಡುಪಿ: 2016ರ ಬಹುಕೋಟಿ ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ಅಂತಿಮ ತೀರ್ಪು ಕಳೆದವಾರ ಹೊರಬಂದಿತ್ತು. ಉಡುಪಿಯ ಜಿಲ್ಲಾ ನ್ಯಾಯಾಲಯ ಪತ್ನಿ ಪುತ್ರ ಹಾಗೂ ಓರ್ವ ಜ್ಯೋತಿಷಿಗೆ ಜೀವಾವಧಿ ಶಿಕ್ಷೆ ನೀಡಿ ಆದೇಶ ಹೊರಡಿಸಿತ್ತು. ಇನ್ನು ಭಾಸ್ಕರ ಶೆಟ್ಟಿ ತನ್ನ ಬಹುಕೋಟಿ ಆಸ್ತಿಗೆ ಬರೆದಿದ್ದ ವೀಲುನಾಮೆ ಬಹಿರಂಗಗೊಂಡಿದೆ. ಇನ್ನು, ತನ್ನ ಪತ್ನಿ ಒಬ್ಬನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಅವನು ನನ್ನ ಆಸ್ತಿಯನ್ನು ಲಪಟಾಯಿಸುವ ಉದ್ದೇಶದಿಂದ ತನ್ನ ಪುತ್ರ ಹಾಗೂ ಪತ್ನಿಯ ಸ್ನೇಹ ಬೆಳೆಸಿ, ನನ್ನನ್ನು ಮುಗಿಸಲು ಯೋಜನೆ ರೂಪಿಸಿದ್ದಾನೆ, ಎಂದು ಭಾಸ್ಕರ್ ಶೆಟ್ಟಿ ಬರೆದುಕೊಂಡಿದ್ದರು.
ಉದ್ಯಮಿ ಭಾಸ್ಕರ ಶೆಟ್ಟಿ ಕೊಲೆ ಆಗುವ 2 ವಾರಗಳ ಹಿಂದೆ ಅಂದರೆ 2016ರ ಜು. 15ರಂದು ಭಾಸ್ಕರ ಶೆಟ್ಟಿ ತನ್ನ ಆಸ್ತಿಗೆ ಸಂಬಂಧಿಸಿದಂತೆ ವೀಲುನಾಮೆ ಯನ್ನು ಬರೆಸಿದ್ದರು. ಈ ವೀಲೆನಾಮೆಯು ಕೊಲೆ ಪ್ರಕರಣದ ಆರೋಪಪಟ್ಟಿಯಲ್ಲಿ ಸಲ್ಲಿಸಿರುವ ಒಟ್ಟು 270 ದಾಖಲೆಗಳ ಪೈಕಿ 95ನೇ ದಾಖಲೆಯಾಗಿದ್ದು, ಇದನ್ನು ನ್ಯಾಯಾಲಯ ವಿಚಾರಣೆ ವೇಳೆ ಪರಿಗಣಿದೆ .
ಪ್ರಕರಣದ ಆರೋಪಿಗಳಾದ ಪತ್ನಿ, ಮಗ ಸೇರಿದಂತೆ ಮೂವರು ಜೀವಿತಾವಧಿ ಜೈಲುಶಿಕ್ಷೆಗೆ ಗುರಿಯಾಗಿರುವ ಹಿನ್ನಲೆಯಲ್ಲಿ ಈಗ ಭಾಸ್ಕರ ಅವರ ಆಸ್ತಿಯ ವಾರಸುದಾರಿಕೆಯ ಯಾರಿಗೆ ಸೇರಲಿದೆ ಎಂಬ ಕುತೂಹಲ ಎದುರಾಗಿತ್ತು. 2016 ರಲ್ಲಿ ಭಾಸ್ಕರ್ ಶೆಟ್ಟಿ ಬರೆದ ವೀಲುನಾಮೆಯ ಸಾರಾಂಶ ಏನೆಂದರೆ. “ನನ್ನ ಪತ್ನಿ ಬೇರೆ ವ್ಯಕ್ತಿಯ ಜತೆ ಅನೈತಿಕ ಸಂಬಂಧ ಹೊಂದಿದ್ದು, ಈ ವಿಚಾರದಲ್ಲಿ ನನ್ನ ಪತ್ನಿ ಮತ್ತು ಮಗ ನನಗೆ ದೈಹಿಕ ಹಲ್ಲೆ ನಡೆಸಿದ್ದಾರೆ.
ನಾನು ಆಗಸ್ಟ್‌ನಲ್ಲಿ ವಿದೇಶಕ್ಕೆ ಹೋಗಲಿದ್ದು, ಈ ಮಧ್ಯೆ ನನ್ನ ಜೀವಕ್ಕೆ ಪತ್ನಿ ಮತ್ತು ಮಗನಿಂದ ಅಪಾಯ ಇರುವ ಕಾರಣ ಹಾಗೂ ನನ್ನ ಪತ್ನಿಯು ಮಗನೊಂದಿಗೆ ಸೇರಿಕೊಂಡು ಆಸ್ತಿಗಳನ್ನು ಲಪಟಾಯಿಸುವ ಸಾಧ್ಯತೆ ಇರುವುದರಿಂದ ಆಸ್ತಿಗಳ ಬಗ್ಗೆ ಈ ವೀಲುನಾಮೆ ಬರೆದು ಇಡುತ್ತಿದ್ದೇನೆ’.
“ನನ್ನ ಜೀವಕ್ಕೆ ಅಪಾಯವಾಗಿ, ನಾನು ಅಕಾಲಿಕ ಮರಣ ಅಥವಾ ದುರ್ಮರಣಕ್ಕೀಡಾದಲ್ಲಿ ನನ್ನ ಎಲ್ಲ ಹಕ್ಕಿನ ಚರಾಚರ ಆಸ್ತಿಗಳು, ಅವುಗಳಲ್ಲಿರುವ ವಾಣಿಜ್ಯ ಕಟ್ಟಡಗಳಿಂದ ಬರುವ ಬಾಡಿಗೆ ಹಣ, ಬ್ಯಾಂಕ್ ಖಾತೆಯಲ್ಲಿರುವ ಹಣ, ನನ್ನ ಹೆಸರಿನಲ್ಲಿ ರುವ ವಿಮಾ ಪಾಲಿಸಿಗಳಿಂದ ಬರುವ ಹಣ, ನನ್ನ ತಾಯಿ ಗುಲಾಬಿ ಶೆಡ್ತಿಗೆ ಸೇರತಕ್ಕದ್ದು. ಹೊರತು ಅದರಲ್ಲಿ ಬೇರೆ ಯಾರಿಗೂ ಹಕ್ಕು ಹಾಗೂ ಸಂಬಂಧಗಳು ಇರಬಾರದು’. “ಒಂದು ವೇಳೆ ನನ್ನಗಿಂತ ಮೊದಲು ನನ್ನ ತಾಯಿಯವರು ನಿಧನ ಹೊಂದಿದಲ್ಲಿ ನನ್ನ ಕಾಲಾನಂತರ ನನ್ನ ಆಸ್ತಿಗಳಲ್ಲಿ ತಲಾ ಶೇ. 10ರಂತೆ ಮೂವರು ಸಹೋದರಿಯರಿಗೆ ಪಾಲು ಸಿಗಬೇಕು ಮತ್ತು ಉಳಿದ ಆಸ್ತಿಗಳನ್ನು ಸರಿಯಾಗಿ ಮೂರು ಭಾಗ ಮಾಡಿ ಮೂವರು ಸಹೋದರರು ಹಂಚಿಕೊಳ್ಳಬೇಕೇ ಹೊರತು ನನ್ನ ಪತ್ನಿ ರಾಜೇಶ್ವರಿ ಹಾಗೂ ಮಗ ನವನೀತನಿಗೆ ನನ್ನ ಯಾವುದೇ ಆಸ್ತಿಗಳಲ್ಲಿ ಹಕ್ಕು ಇರಕೂಡದು’ ಎಂದು ಉಲ್ಲೇಖೀಸಿದ್ದರು.
ಉಡುಪಿ ಸಿಟಿ ಬಸ್ ನಿಲ್ದಾಣ ಸಮೀಪದ ಶಿರಿಬೀಡುವಿನಲ್ಲಿರುವ ಸರ್ವೇ ನಂಬ್ರ 114ರಲ್ಲಿರುವ ಒಟ್ಟು 26 ಸೆಂಟ್ಸ್ ಸ್ಥಿರಾಸ್ತಿ ಹಾಗೂ ಅದರಲ್ಲಿರುವ ಶ್ರೀದುರ್ಗಾ ಇಂಟರ್‌ನ್ಯಾಶನಲ್ ಹೊಟೇಲ್ ಕಟ್ಟಡ ಮತ್ತು ಅದರಲ್ಲಿ ಇರುವ ಬಾಡಿಗೆ ಅಂಗಡಿ ಕೋಣೆಗಳು. ಅದೇ ರೀತಿ ನಗರದ ಮಸೀದಿ ರಸ್ತೆಯಲ್ಲಿರುವ ಸರ್ವೇ ನಂಬರ್ 120/14ರಲ್ಲಿನ 26ಸೆಂಟ್ಸ್ ಜಾಗದಲ್ಲಿರುವ ಶಂಕರ್ ಬಿಲ್ಡಿಂಗ್ ಹೆಸರಿನ ವಾಣಿಜ್ಯ ಕಟ್ಟಡ, ಅದರಲ್ಲಿರುವ ಅಂಗಡಿ ಕೋಣೆಗಳು. ನಗರದ ಬಾಳಿಗ ಟವರ್‌ನಲ್ಲಿರುವ ಸುಮಾರು 210 ಚದರ ಅಡಿ ವಿಸ್ತ್ರೀರ್ಣದ ವಾಣಿಜ್ಯ ಅಂಗಡಿ ಕೋಣೆ. ಶಿವಳ್ಳಿ ಗ್ರಾಮದ ಇಂದ್ರಾಳಿಯಲ್ಲಿರುವ 4,500 ಚದರಡಿ ವಿಸ್ತ್ರೀರ್ಣದ “ಈಶ್ವರಿ’ ಹೆಸರಿನ ವಾಸದ ಮನೆ. ವಿದೇಶದಲ್ಲಿ 6 ಮಾಲ್‌ಗಳು ಇದ್ದು, ಸೋದರರಾದ ಸುರೇಂದ್ರ, ಸುರೇಶ ಮತ್ತು ಅಶೋಕ ಶೆಟ್ಟಿ ನನ್ನೊಂದಿಗೆ ವ್ಯವಹಾರ ನೋಡಿಕೊಳ್ಳುತ್ತಿದ್ದು, ನನ್ನ ಬಳಿಕ ಈ ಆಸ್ತಿಯ ಪೂರ್ಣ ಹಕ್ಕು ಈ ಮೂವರು ಸೋದರರಿಗೆ ಸೇರಿದ್ದು ಎಂದು ಭಾಸ್ಕರ ಶೆಟ್ಟಿ ಬರೆದಿದ್ದಾರೆ.
ಜೀವಾವಧಿ ಶಿಕ್ಷೆ ಅಂದರೆ ಅಪರಾಧಿಗಳು ಜೀವನ ಪರ್ಯಂತ ಜೈಲಿನಲ್ಲಿ ಇರಬೇಕು ಎಂಬುದಾಗಿದೆ ಎಂದು ಭಾಸ್ಕರ ಶೆಟ್ಟಿ ಕೊಲೆ ಪ್ರಕರಣದಲ್ಲಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿರುವ ಎಂ. ಶಾಂತಾರಾಮ ಶೆಟ್ಟಿ ತಿಳಿಸಿದ್ದಾರೆ. ಭಾಸ್ಕರ ಆಸ್ತಿ ವಿಚಾರಕ್ಕೆ ಸಂಬಂಧಿಸಿ ರಾಜೇಶ್ವರಿ ಶೆಟ್ಟಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಈ ಸಂಬಂಧ ವಿಚಾರಣೆ ನಡೆಯುತ್ತಿದೆ.