ಸಮಗ್ರ ನ್ಯೂಸ್: ವಿಧಾನಸಭಾ ಚುನಾವಣೆ ಹತ್ತಿರ ಬರುತ್ತಿರುವ ಬೆನ್ನಲ್ಲೇ ರಾಜಕೀಯ ನಾಯಕರ ಆರೋಪ – ಪ್ರತ್ಯಾರೋಪಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಈ ನಡುವೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ ನಡುವೆ ಸಿಡಿ ವಾರ್ ಜೋರಾಗಿದೆ.
ಡಿ.ಕೆಶಿವಕುಮಾರ್ ವಿರುದ್ಧ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದರು ನಮ್ಮ ಕೆಲವು ಮಂತ್ರಿಗಳಿಗೆ ಡಿ.ಕೆ ಶಿವಕುಮಾರ್ ಕಾಂಗ್ರೆಸ್ಗೆ ಬರದೇ ಇದ್ದರೆ ನಿಮ್ಮ ಸಿಡಿ ಬಿಡುಗಡೆ ಮಾಡುತ್ತೇನೆಂದು ಹೆದರಿಸುತ್ತಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದ್ದಾರೆ.
ಡಿ.ಕೆ ಶಿವಕುಮಾರ್ ನಮ್ಮ ಕೆಲವು ಮಂತ್ರಿಗಳಿಗೆ ಕಾಂಗ್ರೆಸ್ ಸೇರ್ಪಡೆಯಾಗುವಂತೆ ಒತ್ತಡ ಹೇರುತ್ತಿದ್ದಾರೆ. ಕಾಂಗ್ರೆಸ್ ಸೇರ್ಪಡೆಯಾಗದೇ ಹೋದಲ್ಲಿ ನಿಮ್ಮ ಸಿಡಿಗಳನ್ನು ಬಿಡುಗಡೆ ಮಾಡುತ್ತೇನೆ. ನೀನು ಕಾಂಗ್ರೆಸ್ ಬರ್ತಿಯಾ ಅಥವಾ ನಿನ್ನ ಸಿಡಿ ಬಿಡುಗಡೆ ಮಾಡಲಾ ಎಂದು ಬೆದರಿಕೆ ಹಾಕುತ್ತಿದ್ದಾನೆ ಎಂದು ಗೋಕಾಕ್ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ನಡೆದ ಸಮಾವೇಶದಲ್ಲಿ ರಮೇಶ್ ಜಾರಕಿಹೊಳಿ ಗಂಭೀರ ಆರೋಪ ಮಾಡಿದ್ದಾರೆ.
ನನ್ನ ಬಳಿಯೂ ಡಿಕೆಶಿಯ 10 ಸಿಡಿಗಳಿವೆ. ಆದರೆ ನಾನು ಅದನ್ನು ರಿಲೀಸ್ ಮಾಡೋದಿಲ್ಲ. ಅವನ ಹೆಂಡತಿ ನನ್ನ ತಂಗಿಯಿದ್ದಂತೆ. ಆಕೆಯ ಮುಖ ನೋಡಿಕೊಂಡು ನಾನು ಡಿಕೆಶಿಯ ಸಿಡಿಯನ್ನು ನನ್ನ ಬಳಿಯೇ ಇಟ್ಟುಕೊಂಡಿದ್ದೇನೆ. ನಾವು ಯುದ್ಧ ಮಾಡುವ ಜನ. ನಮಗೆ ಷಡ್ಯಂತ್ರ ಮಾಡಲು ಗೊತ್ತಿಲ್ಲ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.
ರಾಜ್ಯದಲ್ಲಿ ನನ್ನ ಸಿಡಿ ಕೇಸ್ ಭಾರೀ ದೊಡ್ಡ ಮಟ್ಟದಲ್ಲಿ ಸುದ್ದಿ ಮಾಡುತ್ತಿದ್ದ ಸಂದರ್ಭದಲ್ಲಿ ಡಿಕೆಶಿ ನನ್ನ ಕೆಲಸವೇ ಇದು ಎಂದು ಹೇಳಿದ್ದ. ನನ್ನ ಪುತ್ರನಿಗೆ ಲಕ್ಷ್ಮೀದೇವಿ ಮೇಲೆ ಆಣೆ ಮಾಡಿಸಿ ಬೇಕಿದ್ದರೆ ಈ ಆರೋಪ ಸುಳ್ಳೋ ಸತ್ಯವೋ ಎಂದು ನೀವೇ ಕೇಳಿ. ನಾನು ಯುದ್ಧ ಮಾಡೋಣ ಎಂದರೆ ಕನಕಪುರಕ್ಕೆ ಬಂದು ಯುದ್ಧ ಮಾಡೋಕೂ ಸಿದ್ಧ. ಆದರೆ ಷಡ್ಯಂತ್ರ ಮಾಡಲು ನನ್ನಿಂದ ಸಾಧ್ಯವಿಲ್ಲ ಎಂದು ಹೇಳಿದ್ದಾರೆ.