ಹರಿಯಾಣ: ಅಂತರ್ಜಾಲದಿಂದ ಎಷ್ಟು ಉಪಯೋಗ ಇದೆಯೋ ಅಷ್ಟೇ ಕೆಡುಕು ಕೂಡಾ ಇದೆ ಎನ್ನುವುದಕ್ಕೆ ಈ ಘಟನೆ ಸಾಕ್ಷಿ. ಯಾರೂ ಊಹಿಸಲಾಗದ ಈ ಘಟನೆ ನಡೆದದ್ದು ಮೇ 24 ರಂದು ಗುರುಗ್ರಾಮ್ನ ರೆವಾರಿ ಎಂಬ ಗ್ರಾಮದ ಒಂದು ಶಾಲೆಯಲ್ಲಿ. ಇಲ್ಲಿ 10-ವರ್ಷದ ಬಾಲಕಿಯ ಮೇಲೆ ಏಳು ಹುಡುಗರಿಂದ ಸಾಮೂಹಿಕ ಅತ್ಯಾಚಾರ ನಡೆದಿದೆ. ಕೃತ್ಯ ನಡೆಯುವ ಮೊದಲು ಸಂತ್ರಸ್ತೆ ಮತ್ತು ಅರೋಪಿಗಳು ಅದೇ ಶಾಲೆಯ ಮೈದಾನದಲ್ಲಿ ಆಡುತ್ತಿದ್ದರು. ಅತ್ಯಾಚಾರ ನಡೆಸಿರುವವರಲ್ಲಿ ಒಬ್ಬನನ್ನು ಬಿಟ್ಟು ಉಳಿದವರೆಲ್ಲ10-12 ವರ್ಷ ವಯಸ್ಸಿನ ಮಕ್ಕಳು!! ಈ ದುರುಳ ಬಾಲಕರು ತಾವೆಸಗಿದ ಹೀನ ಕೃತ್ಯವನ್ನು ಮೊಬೈಲ್ಗಳಲ್ಲಿ ರೆಕಾರ್ಡ್ ಸಹ ಮಾಡಿಕೊಂಡಿದ್ದಾರೆ.
ಸದರಿ ವೀಡಿಯೊ ಕ್ಲಿಪ್ಪಿಂಗ್ ಒಬ್ಬರಿಂದ ಮತ್ತೊಬ್ಬರಿಗೆ ಫಾರ್ವರ್ಡ್ ಆಗುತ್ತಾ ಸಂತ್ರಸ್ತೆಯ ನೆರೆಮನೆಯವನಿಗೆ ತಲುಪಿದಾಗ ಆತ ಕೂಡಲೇ ಅಕೆಯ ಪೋಷಕರಿಗೆ ವಿಷಯ ತಿಳಿಸಿದ್ದಾನೆ. ಬಾಲಕಿಯ ತಂದೆ ಬುಧವಾರದಂದು ದೂರು ನೀಡಿದ ನಂತರ ಆರೋಪಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಎಲ್ಲ ಏಳು ಆರೋಪಿತರ ವಿರುದ್ಧ ಐಪಿಸಿ ಸೆಕ್ಷನ್ 376 ಡಿ (ಸಾಮೂಹಿಕ ಅತ್ಯಾಚಾರ), 354 ಸಿ (ಲೈಂಗಿಕ ವಿಕೃತಿ) ಮತ್ತು 506 (ಕ್ರಿಮಿನಲ್ ಬೆದರಿಕೆ), ಪೋಕ್ಸೊ ಕಾಯ್ದೆ, ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆ ಹಾಗೂ ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡ ಕಾಯ್ದೆಗಳ ಅಡಿಯಲ್ಲಿ ಪ್ರಕರಣವನ್ನು ಮಹಿಳಾ ಪೊಲೀಸ್ ಠಾಣೆಯಲ್ಲಿ ದಾಖಲಿಸಿಕೊಳ್ಳಲಾಗಿದೆಯೆಂದು ರೆವಾರಿಯ ಡಿಎಸ್ಪಿ ಹಂಸ್ರಾಜ್ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಅತ್ಯಾಚಾರಿಗಳಲ್ಲಿ ಕೇವಲ ಒಬ್ಬನು ಮಾತ್ರ ವಯಸ್ಕನಾಗಿದ್ದು ಅವನು 18ರ ಪ್ರಾಯದವನಾಗಿದ್ದಾನೆ.
‘ವಿಷಯವನ್ನು ನಮ್ಮ ಗಮನಕ್ಕೆ ತಂದ ಕೂಡಲೇ ಅರೋಪಿಗಳ ವಿರುದ್ಧ ಕೇಸ್ ದಾಖಲಿಸಿ ಬಂಧಿಸಿದ್ದೇವೆ. ಆರೋಪಿಗಳು ಮತ್ತು ಬಾಲಕಿ ಒಂದೇ ಏರಿಯಾದಲ್ಲಿ ವಾಸವಾಗಿದ್ದಾರೆ, ವಿಡಿಯೊವನ್ನು ನೋಡಿದ ನಂತರ ನೆರೆಹೊರೆಯವರೇ ಅತ್ಯಾಚಾರಿಗಳನ್ನು ಗುರುತಿಸಿದ್ದಾರೆ,’ ಎಂದು ಡಿಎಸ್ಪಿ ಹಂಸ್ರಾಜ್ ಹೇಳಿದ್ದಾರೆ.
ಏನೇ ಆದರೂ ಎಳೆಯ ಮಕ್ಕಳೂ ಇಂತಹ ಹೀನಕೃತ್ಯಕ್ಕೆ ಇಳಿದಿರುವುದು ಅಪಾಯಕಾರಿ.