ಸಮಗ್ರ ನ್ಯೂಸ್: ಅಂತರಾಷ್ಟ್ರೀಯ ಮಟ್ಟದ ಸೌಕರ್ಯವನ್ನು ಪಣಂಬೂರು ಬೀಚ್‍ನಲ್ಲಿ ಬರುವ ಪ್ರವಾಸಿಗರಿಗೆ ನೀಡುವ ಸಲುವಾಗಿ ಸರಕಾರಿ ಖಾಸಗೀ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಶಾಸಕರಾದ ಡಾ.ಭರತ್ ಶೆಟ್ಟಿ ವೈ ನುಡಿದರು.
ಸೋಮವಾರ ಸಂಜೆ 7.5 ಕೋಟಿ ರೂ.ವೆಚ್ಚದಲ್ಲಿ ಪಣಂಬೂರು ಬೀಚ್ ಅಭಿವೃದ್ಧಿ ಕಾರ್ಯಗಳಿಗೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.
ಮಂಗಳೂರು ಉತ್ತರ ಕ್ಷೇತ್ರವು ದೊಡ್ಡದಾದ ಬೀಚ್ ಅನ್ನು ಹೊಂದಿದೆ. ಪಣಂಬೂರು ಬೀಚ್ ಅಂತರಾಷ್ಟ್ರೀಯ ಮಟ್ಟಕ್ಕೆ ಬೆಳೆಸಬೇಕಿದೆ. ಈ ಹಿಂದೆ ಸರಕಾರಕ್ಕೆ 10 ಸಾವಿರ ರೂ.ಗಳ ಕನಿಷ್ಠ ಆದಾಯ ಬರುತ್ತಿತ್ತು.
ಇದೀಗ ಹೊಸ ಮಾದರಿಯ ಒಪ್ಪಂದದಲ್ಲಿ ಗರಿಷ್ಠ 10 ಲಕ್ಷ ರೂ.ಗಳು ಸರಕಾರಕ್ಕೆ ಪ್ರತೀ ತಿಂಗಳು ಆದಾಯ ಸಿಗಲಿದೆ.ಜತೆಗೆ ಪ್ರವಾಸಿಗರಿಗೆ ಎಲ್ಲಾ ಸೌಲಭ್ಯ ಸಿಗಲಿದೆ ಎಂದರು.
ಬೀಚ್ ಉದ್ದಕ್ಕೂ ಕಾರಿಡಾರ್ ನಿರ್ಮಾಣ, ತಣ್ಣೀರುಬಾವಿ ಬೀಚ್, ಸುರತ್ಕಲ್ ಬೀಚ್ ಅಭಿವೃದ್ಧಿ , ಹೊಸ ಪ್ರವಾಸಿ ಕೇಂದ್ರವಾಗಿ ನಾಯರ್ ಕುದ್ರು ಸೇರಿದಂತೆ ಹಲವು ಪ್ರವಾಸಿ ತಾಣಗಳ ಬೆಳವಣಿಗೆಗೆ ಯೋಜನೆ ರೂಪಿಸಲಾಗಿದ್ದು ಹಂತ ಹಂತವಾಗಿ ಅಭಿವೃದ್ಧಿಯಾಗಲಿದೆ. ಇತರ ಸಣ್ಣ ಪುಟ್ಟ ದೇಶಗಳು ಪ್ರವಾಸೋದ್ಯಮದಲ್ಲಿ ಆದಾಯ ಗಳಿಸುತ್ತಿದ್ದು, ನಮ್ಮ ಸ್ಥಳೀಯ ಯುವ ಸಮುದಾಯವೂ ಸ್ವಾವಲಂಬಿ ಜೀವನಕ್ಕೆ ಪ್ರವಾಸೋದ್ಯಮ ಬೆಳವಣಿಗೆ ಪೂರಕ ಎಂದು ನುಡಿದರು.
ಎಲ್‍ಆರ್ ಎಸ್ ಬೀಚ್ ಟೂರಿಸಂ ಪಣಂಬೂರು ಸಂಸ್ಥೆಯ ಪಾಲುದಾರರಾದ ಲಕ್ಷ್ಮೀಶ್ ಭಂಡಾರಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಪಂಣಂಬೂರು ಬೀಚ್‍ನಲ್ಲಿ ಸಕಲ ಸೌಲಭ್ಯ ಒದಗಿಸುವ ಸಲುವಾಗಿ ನೀಲಿ ನಕಾಶೆ ರೂಪಿಸಲಾಗಿದೆ. ಮನರಂಜನೆ, ಸಾಹಸ ಕೀಡ್ರೆ, ಬೊಟಿಂಗ್ , ಹಟ್ ಹೌಸ್ ಸಹಿತ ಹಲವು ಸೌಲಭ್ಯ ಮುಂದಿನ ದಿನಗಳಲ್ಲಿ ಪ್ರವಾಸಿಗರಿಗೆ ಸಿಗಲಿದೆ ಎಂದರು.
ಎಲ್‍ಆರ್‍ಎಸ್ ಪಾಲುದಾರರಾದ ಡಾ.ರಾಜೇಶ್ , ಸ್ಥಳೀಯ ಕಾರ್ಪೋರೇಟರ್ ಸುನೀತಾ, ಬಿಜೆಪಿ ಮುಖಂಡ ಅರವಿಂದ್ ಬೆಂಗ್ರೆ, ಬೀಚ್ ನಿರ್ವಹಣಾ ಅಧಿಕಾರಿಗಳು ಉಪಸ್ಥಿತರಿದ್ದರು.