ಸಮಗ್ರ ನ್ಯೂಸ್: ಐದು ಮದ್ವೆಯಾದ ವ್ಯಕ್ತಿಯನ್ನು ಆತನ 5ನೇ ಹೆಂಡತಿಯೊಬ್ಬಳು ಕೊಡಲಿಯಿಂದ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ ಆಘಾತಕಾರಿ ಘಟನೆ ಮಧ್ಯಪ್ರದೇಶದ ಸಿಂಗ್ರೂಲಿಯಲ್ಲಿ ನಡೆದಿದೆ. ಮೃತ ವ್ಯಕ್ತಿಯನ್ನು ಬಿರೇಂದರ್ ಗುರ್ಜರ್ ಎಂದು ಗುರುತಿಸಲಾಗಿದೆ.
ಐದು ಮದುವೆಯಾಗಿದ್ದ ಈತನನ್ನು ಈತನ 5ನೇ ಪತ್ನಿ ಕಾಂಚನಾ ಗುರ್ಜರ್ ಕೊಡಲಿಯಿಂದ ಕೊಚ್ಚಿ ಹಲ್ಲೆ ಮಾಡಿದ್ದಲ್ಲದೇ ಆತನ ದೇಹವನ್ನು ದೂರ ಎಸೆಯುವ ಮೊದಲು ಆತನ ಮರ್ಮಾಂಗವನ್ನು ಕತ್ತರಿಸಿ ಎಸೆದಿದ್ದಾಳೆ.
ಕೊಲೆಯಾದ ಬಿರೇಂದ್ರ ಗುರ್ಜರ್ ಶವ ಫೆಬ್ರವರಿ 21ರಂದು ಪತ್ತೆಯಾಗಿದ್ದು, ಈ ವೇಳೆ ಆತನ ಮರ್ಮಾಂಗ ಹಾಗೂ ಕುತ್ತಿಗೆಯಲ್ಲಿ ಗಾಯಗಳಿದ್ದವು. ಶವ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ವಿಚಾರಣೆ ನಡೆಸಲು ಆರಂಭಿಸಿದ್ದರು. ಇತ್ತ ಮೃತ ಬಿರೇಂದ್ರನ ಪತ್ನಿ ಕಾಂಚನಾ ಗುರ್ಜರ್ ತನ್ನ ಗಂಡನ ಹತ್ಯೆ ಕುರಿತಂತೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದಳು ಎಂದು ಕೊತ್ವಾಲಿ ಪೊಲೀಸ್ ಸ್ಟೇಷನ್ ಇನ್ಚಾರ್ಜ್ ಅರುಣ್ ಪಾಂಡೆ ಹೇಳಿದ್ದಾರೆ.
ಪ್ರಕರಣದ ಹಿಂದೆ ಬಿದ್ದ ಪೊಲೀಸರು ಮೃತ ವ್ಯಕ್ತಿಯ ಸಂಬಂಧಿಗಳು ಸ್ನೇಹಿತರು ಸೇರಿದಂತೆ ಎಲ್ಲರನ್ನು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಈ ತನಿಖೆ ವೇಳೆ ಮೃತನ ಪತ್ನಿಯನ್ನು ಕೂಡ ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸಿದ್ದು, ಆಕೆಗೆ ಹಲವು ರೀತಿಯಲ್ಲಿ ಪ್ರಶ್ನೆಗಳನ್ನು ಕೇಳಿ ಬಾಯಿಬಿಡಿಸಿದಾಗ, ಪ್ರಕರಣ ಬೆಳಕಿಗೆ ಬಂದಿದೆ.
ಕೊಲೆಗೂ ಮೊದಲು ಕಾಂಚನಾ 20 ನಿದ್ರೆ ಮಾತ್ರೆಗಳನ್ನು(sleeping pills) ಗಂಡನಿಗೆ ಆಹಾರದಲ್ಲಿ ಬೆರೆಸಿ ನೀಡಿದ್ದಾಳೆ. ಕೊಲೆಗೂ ಮೊದಲು ಕೊಡಲಿಯಿಂದ ಗಂಡನ ಮೇಲೆ ಹಲವು ಬಾರಿ ಹೊಡೆದು ಹಲ್ಲೆ ಮಾಡಿದ್ದು, ಕೊನೆಯದಾಗಿ ಆತನ ಮರ್ಮಾಂಗವನ್ನು (genitals) ಹರಿತವಾದ ಆಯುಧದಿಂದ ಹತ್ಯೆ ಮಾಡಿದ್ದಾಳೆ.
ಕೊಲೆಯ ಬಳಿಕ ಕಾಂಚನಾ ಗಂಡನ ಮೃತದೇಹವನ್ನು ಬಟ್ಟೆಯಿಂದ ಸುತ್ತಿ ರಸ್ತೆ ಬದಿ ಎಸೆದು ಬಂದಿದ್ದಾಳೆ. ಅಲ್ಲದೇ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಕೊಲೆಯಾದ ಗಂಡನ ಬಟ್ಟೆ ಚಪ್ಪಲಿಗಳನ್ನು ಸುಟ್ಟು ಹಾಕಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ. ಪತಿಯ ಮಾದಕ ವ್ಯಸನದಿಂದ ಮುಕ್ತಿ ಪಡೆಯಲು ಈ ಕೃತ್ಯ ಎಸಗಿರುವುದಾಗಿ ಪತ್ನಿ ತನಿಖೆ ವೇಳೆ ಹೇಳಿದ್ದಾಳೆ.