ಸಮಗ್ರ ನ್ಯೂಸ್: ಆಪರೇಷನ್ ಎಲಿಫೆಂಟ್ ಕಾರ್ಯಾಚರಣೆಯಲ್ಲಿ ಒಂಟಿಸಲಗವನ್ನು ಹಿಡಿದ ಬಳಿಕ ಶಾಂತವಾಗಿದ್ದ ಕಡಬ ತಾಲೂಕಿನ ಕಲ್ಲುಗುಡ್ಡೆ, ಉದನೆ, ರೆಂಜಿಲಾಡಿ ಗ್ರಾಮಗಳಲ್ಲಿ ಇದೀಗ ಮತ್ತೊಂದು ಒಂಟಿಸಲಗ ಪ್ರತ್ಯಕ್ಷಗೊಂಡಿದೆ.
ಕಲ್ಲುಗುಡ್ಡೆ-ಉದನೆ ಸಂಪರ್ಕ ರಸ್ತೆಯ ನಿಡ್ಡೋ ಬಳಿಯ ಅರಣ್ಯದಲ್ಲಿ ನಾಲ್ಕು ದಿನಗಳ ಹಿಂದೆ ಕಾಡಾನೆಯೊಂದು ವ್ಯಕ್ತಿಯೋರ್ವರಿಗೆ ಕಾಣಿಸಿದೆ ಎಂಬ ಮಾಹಿತಿ ಲಭಿಸಿದೆ.
ರವಿವಾರ(ಫೆ.26) ಬೆಳಗ್ಗೆ ಕಾಡಾನೆ ಸಿಕ್ಕಿದ್ದು ಅವರು ನೀಡಿದ ಮಾಹಿತಿ ಆಧರಿಸಿ ಅರಣ್ಯ ಇಲಾಖೆಯ ತಂಡವು ಕಾಡಾನೆ ಪತ್ತೆ ಕಾರ್ಯವನ್ನು ಮತ್ತೆ ಚುರುಗೊಳಿಸಿದೆ. ಅಡೆಂಜ, ಬಳಕ್ಕ, ಇಚಿಲಡ್ಕ, ನಿಡ್ಡೋ ಅರಣ್ಯ ಪ್ರದೇಶದಲ್ಲಿಯೂ ತೀವ್ರ ಹುಡುಕಾಟ ನಡೆಸಲಾಗಿದೆ.
ಕಡಬ ತಾಲೂಕಿನ ರೆಂಜಿಲಾಡಿಯ ಮೀನಾಡಿಯಲ್ಲಿ ಇತ್ತೀಚೆಗೆ ಕಾಡಾನೆ ದಾಳಿಗೆ ಇಬ್ಬರು ಬಲಿಯಾಗಿದ್ದರು. ಇದರ ಬೆನ್ನಲ್ಲೇ ಸ್ಥಳೀಯರ ಆಗ್ರಹದಂತೆ 5 ಸಾಕಾನೆ ಗಳ ನೆರವಿನಿಂದ ಕಾಡಾನೆ ಸೆರೆಗೆ ಕಾರ್ಯಾಚರಣೆ ನಡೆಸಲಾಗಿದ್ದು ಮೂರನೇ ದಿನದ ಕಾರ್ಯಾಚರಣೆಯಲ್ಲಿ ನರಹಂತಕ ಕಾಡಾನೆಯನ್ನು ಕೊಂಬಾರು ಬಳಿ ಸೆರೆಹಿಡಿದು ನಾಗರಹೊಳೆ ಸಾಕಾನೆ ಶಿಬಿರಕ್ಕೆ ಸಾಗಿಸಲಾಗಿತ್ತು.