ಸಮಗ್ರ ನ್ಯೂಸ್: ಮಾ.9 ರಿಂದ ಆರಂಭವಾಗಲಿರುವ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಗೆ ಹಿಜಾಬ್ ಧರಿಸಿ ಹಾಜರಾಗಲು ಅನುಮತಿ ನೀಡುವಂತೆ ವಿದ್ಯಾರ್ಥಿನಿಯರು ಮಾಡಿದ ಮನವಿಯನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ತಿರಸ್ಕರಿಸಿದ್ದು, ಪದವಿಪೂರ್ವ ಕಾಲೇಜುಗಳ ಪ್ರಾಂಶುಪಾಲರು ಮತ್ತು ಅಧಿಕಾರಿಗಳಿಗೆ ಹಿಜಾಬ್ ಧರಿಸಲು ಅವಕಾಶವಿಲ್ಲ ಎಂದು ಸೂಚಿಸಿದೆ.
‘ಹಿಜಾಬ್ ಪ್ರಸ್ತಾವನೆಯು ಸುಪ್ರೀಂ ಕೋರ್ಟ್‌ನಲ್ಲಿರುವ ಕಾರಣ ವಾರ್ಷಿಕ ಪರೀಕ್ಷೆಯ ವೇಳೆ ಹಿಜಾಬ್ ಅನುಮತಿಸುವ ಪ್ರಶ್ನೆಯೇ ಉದ್ಬಾವಿಸುವುದಿಲ್ಲ. ಈ ಕಾರಣಕ್ಕೆ ಯಾವ ವಿದ್ಯಾರ್ಥಿನಿಯರು ಪರೀಕ್ಷೆಗೆ ಗೈರಾಗುತ್ತಾರೆ ಎಂಬುದನ್ನು ನಾವು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ’ ಎಂದು ಶಾಲಾ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ತಿಳಿಸಿದರು.
ಉಡುಪಿ, ಚಿಕ್ಕಬಳ್ಳಾಪುರ, ಚಾಮರಾಜನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳ ಪದವಿಪೂರ್ವ ಕಾಲೇಜುಗಳ ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ಆಯಾ ಕಾಲೇಜುಗಳ ಪ್ರಾಂಶುಪಾಲರಿಗೆ ಹಿಜಾಬ್ ಧರಿಸಿ ಪರೀಕ್ಷೆ ಬರೆಯಲು ಅನುಮತಿ ನೀಡುವಂತೆ ಮನವಿ ಸಲ್ಲಿಸಿದ್ದರು ಎಂದು ಇಲಾಖೆಯ ಮೂಲಗಳು ತಿಳಿಸಿವೆ.
‘ಹಿಜಾಬ್ ಧರಿಸುವುದು ಇಸ್ಲಾಮಿಕ್ ನಂಬಿಕೆಯ ಅಗತ್ಯ ಧಾರ್ಮಿಕ ಆಚರಣೆಯ ಭಾಗ ಅಲ್ಲ’ ಎಂದು ರಾಜ್ಯ ಹೈಕೋರ್ಟ್ 2022 ರ ಮಾರ್ಚ್‌ನಲ್ಲಿ ತಿಳಿಸಿತ್ತು. ಅಲ್ಲದೇ ಎಲ್ಲಾ ವಿದ್ಯಾರ್ಥಿಗಳು ಪರೀಕ್ಷೆಗಳಿಗೆ ನಿಗದಿಪಡಿಸಿದ ಸಮವಸ್ತ್ರವನ್ನು ಕಡ್ಡಾಯವಾಗಿ ಧರಿಸಬೇಕು ಎಂದು ರಾಜ್ಯ ಸರ್ಕಾರ 2022 ಫೆ. 5ರಂದು ಆದೇಶವನ್ನು ಹೊರಡಿಸಿದ್ದು, ಹೈಕೋರ್ಟ್ ಅದನ್ನು ಎತ್ತಿಹಿಡಿದಿತ್ತು. ನಂತರ ಹೈಕೋರ್ಟ್ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಮರುಪ್ರಶ್ನಿಸಲಾಗಿದ್ದು, ಯಾವುದೇ ನಿರ್ದಿಷ್ಟ ತೀರ್ಪು ಇನ್ನೂ ಬಂದಿಲ್ಲ.