ಸಮಗ್ರ ನ್ಯೂಸ್: ಬೂಕನಕೆರೆ ಸಿದ್ದಲಿಂಗಪ್ಪ ಯಡಿಯೂರಪ್ಪ. ರಾಜ್ಯ ರಾಜಕಾರಣದಲ್ಲಿ ರಾಜಾಹುಲಿ, ರೈತ ಬಂಧು, ಶಿಕಾರಿಪುರ ಎಂದಾಕ್ಷಣ ನೆನಪಿಗೆ ಬರುವುದು ಬಿ.ಎಸ್ ಯಡಿಯೂರಪ್ಪ. ಇವರು ಇಂದು 80ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ದಕ್ಷಿಣ ಭಾರತದಲ್ಲಿ ಕಮಲವನ್ನು ಅರಳಿಸಿದ ನಾಯಕ. ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿ ಅಧಿಕಾರಕ್ಕೆ ತರಲು ಹಗಲಿರುಳು ಶ್ರಮಿಸಿದ್ದಾರೆ. 4 ಬಾರಿ ಮುಖ್ಯಮಂತ್ರಿಯಾಗುವ ಮೂಲಕ ಕರ್ನಾಟಕ ರಾಜಕಾರಣದಲ್ಲಿ ಇತಿಹಾಸ ಬರೆದಿದ್ದಾರೆ.
ಬಿಎಸ್ ಯಡಿಯೂರಪ್ಪ ಚುನಾವಣಾ ರಾಜಕೀಯದಿಂದ ದೂರು ಉಳಿದು, ಪಕ್ಷ ಕಟ್ಟುವಲ್ಲಿ, ಅಧಿಕಾರಕ್ಕೆ ತರಲು ತಮ್ಮ ಕೊನೆ ಉಸಿರುವವರೆಗು ಶ್ರಮಿಸುತ್ತೇನೆ ಎಂದ ಜಟ್ಟಿಗ. ಹುಟ್ಟಾ ಹೋರಾಟಗಾರರಾದ ಇವರು ನಡೆದು ಬಂದ ದಾರಿ ಸುಲಭದ್ದೇನಲ್ಲ. ಹೀಗೆ ಅವರು ಸಾಗಿದ ದಾರಿ ಇಲ್ಲಿದೆ
ಬಿಎಸ್ ಯಡಿಯೂರಪ್ಪ ಅವರು 1943 ಫೆಬ್ರವರಿ 27ರಂದು ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ಜನಿಸಿದರು. ತಂದೆ ಸಿದ್ದಲಿಂಗಯ್ಯ ಹಾಗೂ ತಾಯಿ ತಾಯಮ್ಮನವರ ಸುಪುತ್ರ. ತುಮಕೂರು ಜಿಲ್ಲೆಯ ಯಡಿಯೂರು ಊರಿನಲ್ಲಿರುವ ಸಿದ್ಧಲಿಂಗೇಶ್ವರ ದೇವರ ಹೆಸರನ್ನು ಇವರಿಗೆ ನಾಮಕರಣ ಮಾಡಲಾಗಿದೆ. ಯಡಿಯೂರಪ್ಪನವರು ವೀರಶೈವ ಲಿಂಗಾಯತ ಜಾತಿಯ ಬಣಜಿಗ ಪಂಗಡಕ್ಕೆ ಸೇರಿದವರು. ಬಿಎಸ್ವೈ ನಾಲ್ಕನೇ ವಯಸ್ಸಿನಲ್ಲಿ ತಾಯಿಯನ್ನು ಕಳೆದುಕೊಂಡರು.
ಮುಂದೆ ಮಂಡ್ಯದ ಪಿಇಎಸ್ ಕಾಲೇಜಿನಲ್ಲಿ ವ್ಯಾಸಂಗ ಮುಗಿಸಿದರು. ಬಿಎಸ್ ಯಡಿಯೂರಪ್ಪ ತಮ್ಮ ಕಾಲೇಜು ದಿನಗಳಲ್ಲಿಯೇ ಆರ್ಎಸ್ಎಸ್ ಚಟುವಟಿಕೆಗಳಲ್ಲಿ ಗುರುತಿಸಿಕೊಂಡಿದ್ದರು. 1965ರಲ್ಲಿ ಸಮಾಜ ಕಲ್ಯಾಣ ಇಲಾಖೆಯಲ್ಲಿ ಪ್ರಥಮ ದರ್ಜೆಯ ಗುಮಾಸ್ತರಾಗಿ ವೃತ್ತಿಜೀವನ ಆರಂಭಿಸಿದರು. ಆ ಉದ್ಯೋಗವನ್ನು ತ್ಯಜಿಸಿ ಶಿಕಾರಿಪುರದ ವೀರಭದ್ರ ಶಾಸ್ತ್ರೀ ಶಂಕರ್ ರೈಸ್ ಮಿಲ್ನಲ್ಲಿ ಗುಮಾಸ್ತರಾಗಿ ಸೇರಿಕೊಂಡರು. 1967ರಲ್ಲಿ ರೈಸ್ ಮಿಲ್ ಮಾಲೀಕರ ಸುಪುತ್ರಿ ಮೈತ್ರಾ ದೇವಿಯವರನ್ನು ವಿವಾಹವಾದರು. ದಂಪತಿಗೆ ಬಿವೈ ವಿಜಯೇಂದ್ರ, ಬಿ.ವೈ ರಾಘವೇಂದ್ರ, ಅರುಣಾದೇವಿ, ಪದ್ಮಾವತಿ, ಉಮಾದೇವಿ ಮಕ್ಕಳಿದ್ದಾರೆ. 1972 ರಲ್ಲಿ ಇದೇ ಶಿಕಾರಿಪುರದ ಜನಸಂಘದ ಅಧ್ಯಕ್ಷರಾಗಿ ಸಾರ್ವಜನಿಕ ಜೀವನಕ್ಕೆ ಕಾಲಿಟ್ಟರು.
ಹೋರಾಟ ಮನೋಭಾವ, ನಾಯಕತ್ವ ಗುಣ ಹೊಂದಿದ ಇವರು ಶಾಲಾ-ಕಾಲೇಜುಗಳಲ್ಲಿ ನಾಯಕರಾಗಿ ಗುರುತಿಸಿಕೊಳ್ಳುತ್ತಿದ್ದ ಯಡಿಯೂರಪ್ಪರ ಸಾರ್ವಜನಿಕ ಜೀವನ ಮೇರು ಪರ್ವತದಂತೆ ಬೆಳೆಯುತ್ತಾ ಸಾಗಿತು. 1975ರ ತುರ್ತು ಪರಿಸ್ಥಿತಿ 45 ದಿನಗಳ ಕಾಲ ಸೆರೆವಾಸ ಬಳ್ಳಾರಿ ಹಾಗೂ ಶಿವಮೊಗ್ಗದಲ್ಲಿ.
ನಂತರ 1700ಮಂದಿಯನ್ನು ಜೀತ ಪದ್ಧತಿಯಿಂದ ವಿಮುಕ್ತಿ ಗೊಳಿಸಿದರು. ಹಾಗೂ ಬಗರ್ ಹುಕುಂ ರೈತರ ಪರವಾಗಿ ಹೋರಾಟ. 1987 ರಲ್ಲಿ ಸೈಕಲ್ ಜಾಥಾ ಮುಖಾಂತರ ಶಿಕಾರಿಪುರ ತಾಲ್ಲೂಕಿನಾದ್ಯಂತ ಸಂಚರಿಸಿ ಬರ ಪರಿಸ್ಥಿತಿ ಅಧ್ಯಯನ ಮಾಡಿ ಸರ್ಕಾರದ ಗಮನಕ್ಕೆ ತಂದರಲ್ಲದೇ ಸಂತ್ರಸ್ತರಿಗೆ ನ್ಯಾಯ ದೊರಕಿಸುವಲ್ಲಿ ಸಫಲರಾದರು.
ಬಿಎಸ್ ಯಡಿಯೂರಪ್ಪ ಕರ್ನಾಟಕದಲ್ಲಿ ಬಿಜೆಪಿಯನ್ನು ಕಟ್ಟಲು ಶುರು ಮಾಡಿದರು. ಹಗಲಿರುಳು ಎನ್ನದೆ ರಾಜ್ಯಾಧ್ಯಂತ ಸೈಕಲ್, ಕಾಲ್ನಡಿಗೆ ಮೂಲಕ ಸಂಚರಿಸಿ ಪಕ್ಷದ ಪ್ರಚಾರ ಕಾರ್ಯ, ಸಂಘಟನೆ ಮಾಡಿದರು. ಸದಾ ರೈತ ಪರ ಕಾಳಜಿ ಹೊಂದಿದ ಇವರು ರೈತರ ಪರವಾಗಿ ಧ್ವನಿ ಎತ್ತುತ್ತಿದ್ದರು. ಬಿ. ಎಸ್ ಯಡಿಯೂರಪ್ಪ ಶಾಸಕಾರಿಗೆ, ಪ್ರತಿಕ್ಷನಾಯಕರಾಗಿ ಮತ್ತು 4 ಬಾರಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ್ದಾರೆ. ಅಭಿವೃದ್ದಿ ಎಂದರೇ ಬೆಂಗಳೂರು ಎಂದು ಇದ್ದ ಕಾಲದಲ್ಲಿ, ತಾವು ಅಧಿಕಾರಕ್ಕೆ ಬಂದಾಗಲೆಲ್ಲ ಉತ್ತರ ಕರ್ನಾಟಕದ ಅಭಿವೃದ್ದಿಗೆ ಸಾಕಷ್ಟು ಕೆಲಸ ಮಾಡಿದ್ದಾರೆ.