ಸಮಗ್ರ ನ್ಯೂಸ್: ದುಬೈಯ ಶಾರ್ಜಾದಲ್ಲಿ ಬುಧವಾರ ನಡೆದ ಅಂತರಾಷ್ಟ್ರೀಯ ಪ್ಯಾರಾ ಅಂತರಾಷ್ಟ್ರೀಯ ಅಥ್ಲೆಟಿಕ್ಸ್ ಕ್ರೀಡಾಕೂಟದಲ್ಲಿ ಚಿಕ್ಕಮಗಳೂರಿನ ಆಶಾ ಕಿರಣ ಅಂಧ ಶಾಲೆಯ ವಿದ್ಯಾರ್ಥಿನಿಯರಾದ ರಾಧಾ ವೆಂಕಟೇಶ್ ಪ್ರಥಮ ಹಾಗೂ ರಕ್ಷಿತಾರಾಜು ದ್ವಿತೀಯ ಸ್ಥಾನ ಪಡೆದು ಅಕ್ಟೋಬರ್ ನಲ್ಲಿ ಚೀನಾದಲ್ಲಿ ನಡೆಯುವ ಪ್ಯಾರಾ ಏಷ್ಯನ್ ಗೇಮ್ಸ್ ಗೆ ಆಯ್ಕೆಯಾಗಿದ್ದಾರೆ.
ಬೆಂಗಳೂರಿನ ಸಾಯಿ ಕ್ರೀಡಾ ಹಾಸ್ಟೆಲ್ ನಲ್ಲಿ ಕ್ರೀಡಾಭ್ಯಾಸ ಮಾಡುತ್ತಿರುವ ಈ ಇಬ್ಬರು ವಿದ್ಯಾರ್ಥಿನಿಯರು ಕೋಚ್ ರಾಹುಲ್ ಬಾಲಕೃಷ್ಣ, ಗೋವಿಂದ್, ಸೌಮ್ಯ ಸಾವಂತ್,ಗೈಡ್ ರನ್ನರ್ ತಬರೇಶ್ ಗರಡಿಯಲ್ಲಿ ಕ್ರೀಡೆಯಲ್ಲಿ ಸಾಧನೆ ಮಾಡುತ್ತಿದ್ದು ಕಳೆದ ಬಾರಿ ದೆಹಲಿಯಲ್ಲಿ ನಡೆದ 400ಮೀ,800ಮೀ ಹಾಗೂ 1500ಮೀ ಓಟದಲ್ಲಿ ಚಿನ್ನದ ಪದಕ ಪಡೆದಿದ್ದರು.
ಬುಧವಾರ ಶಾರ್ಜಾದಲ್ಲಿ ನಡೆದ ಅಂತರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ಸ್ ಮೀಟ್ ನಲ್ಲಿ ಟಿ12 ವಿಭಾಗದ ಕ್ರೀಡಾಕೂಟದ 1500 ಮೀ ಓಟದಲ್ಲಿ ರಾಧಾವೆಂಕಟೇಶ್ 5:16,77 ನಿಮಿಷದಲ್ಲಿ ಕ್ರಮಿಸಿ ಚಿನ್ನದ ಪದಕ ಪಡೆದಿದ್ದಾರೆ.ಟಿ11 ವಿಭಾಗದ 1500ಮೀ ಓಟದಲ್ಲಿ ರಕ್ಷಿತಾರಾಜು 5:44,67ನಿಮಿಷದಲ್ಲಿ ಗುರಿ ಮುಟ್ಟುವ ಮೂಲಕ ಬೆಳ್ಳಿ ಪದಕ ಪಡೆದು ಜಿಲ್ಲೆಗೆ ಮಾತ್ರವಲ್ಲದೇ ರಾಜ್ಯಕ್ಕೂ ಕೀರ್ತಿ ತಂದಿದ್ದಾರೆ.
ರಾಧಾ ವೆಂಕಟೇಶ್ ಮೂಲತ ಚಿತ್ರದುರ್ಗದ ಹೊಳಲ್ಕೆರೆ ಯವರಾಗಿದ್ದು,ರಕ್ಷಿತಾ ರಾಜು ಮೂಡಿಗೆರೆ ತಾಲ್ಲೂಕಿನ ಬಾಳೂರು ಸಮೀಪದ ಗುಡ್ನಳ್ಳಿ ಗ್ರಾಮದವರಾಗಿದ್ದಾರೆ. ಇವರ ಸಾಧನೆಗೆ ಆಶಾ ಕಿರಣ ಶಾಲೆಯ ಆಡಳಿತ ವರ್ಗ ಹಾಗೂ ಸಿಬ್ಬಂದಿ ವರ್ಗ ಹಾಗೂ ಕ್ರೀಡಾಭಿಮಾನಿಗಳು ಪ್ರಶಂಸೆ ವ್ಯಕ್ತ ಪಡಿಸಿದ್ದಾರೆ.