ಭಟ್ಕಳ: ನಗರದಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕಿಸ್ತಾನ ಮೂಲದ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಪಾಕಿಸ್ತಾನ ಮೂಲದ ಖತೀಜಾ ಮೆಹರಿನ್ ಎಂಬಾಕೆ ಇಲ್ಲಿ ನೆಲೆಸಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಪೊಲೀಸರು ಮಹಿಳೆಯನ್ನು ಬಂಧಿಸಿದ್ದಾರೆ. ಕಳೆದ ಎಂಟು ವರ್ಷಗಳ ಹಿಂದೆ ಈಕೆಯನ್ನು ಸ್ಥಳೀಯ ನಿವಾಸಿ ಜಾವೀದ್ ಮೊಹಿದ್ದೀನ್ ರುಕ್ನುದ್ದೀನ್ ಎಂಬಾತ ದುಬೈನಲ್ಲಿ ವಿವಾಹವಾಗಿದ್ದ. ಈಕೆ ಮದುವೆ ನಂತರ 2014ರಲ್ಲಿ ಪ್ರವಾಸಿ ವೀಸಾ ಪಡೆದು 3 ತಿಂಗಳು ಭಾರತಕ್ಕೆ ಬಂದು ವಾಪಸ್ಸಾಗಿದ್ದಳು. ಆ ಬಳಿಕ 2015ರಲ್ಲಿ ಅಕ್ರಮವಾಗಿ ಭಾರತ ಪ್ರವೇಶ ಪಡೆದು ಭಟ್ಕಳದಲ್ಲೇ ನೆಲೆಸಿದ್ದಳು ಎನ್ನಲಾಗಿದೆ. ಭಟ್ಕಳದ ನವಾಯತ ಕಾಲೋನಿಯಲ್ಲಿ ತನ್ನ ಮೂರು ಮಕ್ಕಳೊಂದಿಗೆ ಇವಳು ವಾಸ್ತವ್ಯ ಹೂಡಿದ್ದಳು. ಈ ನಡುವೆ, ಸುಳ್ಳು ದಾಖಲೆ ನೀಡಿ ಓಟರ್ ಐಡಿ, ರೇಷನ್ ಕಾರ್ಡ್, ಜನ್ಮದಾಖಲೆ ಪಡೆದಿದ್ದಳು.
ಅಕ್ರಮವಾಗಿ ವಾಸ ಮಾಡಿರುವ ವಿಚಾರದಲ್ಲಿ ಮಹಿಳೆ ವಿರುದ್ಧ ಐಪಿಸಿ ಸೆಕ್ಷನ್ 468, 471 ಅಡಿ ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ ಹೇಗೆ ಭಾರತಕ್ಕೆ ಪ್ರವೇಶಿಸಿದಳು ಮತ್ತು ಧಾಖಲೆಗಳನ್ನು ಹೇಗೆ ಪಡೆದಳು ಎಂಬ ಆಯಾಮದಲ್ಲಿ ಪೊಲೀಸರು ತೀವ್ರ ತನಿಖೆ ಕೈಗೊಂಡಿದ್ದಾರೆ.