ಬೆಂಗಳೂರು: ಒತ್ತಡಕ್ಕೆ ಮಣಿಯದೆ ಮೈಸೂರಿನಲ್ಲಿ ನಡೆಯುತ್ತಿರುವ ಭೂ ಮಾಫಿಯಾ ನಿಗ್ರಹದ ಬೆನ್ನು ಹತ್ತಿರುವುದೇ ನನ್ನ ವರ್ಗಾವಣೆಗೆ ಕಾರಣ ಎಂದು ಮೈಸೂರಿನ ನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಹೇಳಿದ್ದಾರೆ.
ಮೈಸೂರಿಗೆ ಬಂದ ಆರಂಭದಲ್ಲಿ ನಗರದ ಲಿಂಗಾಂಬುದಿ ಕೆರೆಯ ಪ್ರದೇಶದಲ್ಲಿ ನಡೆದ ಭೂ ಮಾಫಿಯಾ ವಿರುದ್ಧ ತನಿಖೆ ಕೈಗೊಂಡಿದ್ದೆ. ಮೈಸೂರಿನ ರಾಜಕಾಲುವೆ ಮೇಲೆ ಸಾರಾ ಮಹೇಶ್ ಮಾಲಕತ್ವದ ಸಾರಾ ಕಲ್ಯಾಣ ಮಂಟಪ ನಿರ್ಮಾಣವಾಗಿದೆ. ಅದರ ಬಗ್ಗೆ ಸ್ಥಳ ಸರ್ವೆ ನಡೆಸಿ, ಭೂ ಹಗರಣದ ವಿರುದ್ಧ ಕ್ರಮ ಕೈಗೊಳ್ಳಲು ಮುಂದಾಗಿದ್ದೆ. ಅದರ ಆರಂಭದಿಂದಲೂ ಆ ಕೆಲಸ ಕೈಬಿಡುವಂತೆ ನನ್ನ ಮೇಲೆ ಭಾರಿ ಒತ್ತಡ ಹೇರಲಾಗಿತ್ತು. ಇದೀಗ ಯಾವುದೇ ಒತ್ತಡಕ್ಕೆ ಮಣಿಯದ ನನ್ನ ಮೇಲೆ ಸುಳ್ಳು ಆರೋಪದ ಪಿತೂರಿ ನಡೆಸಿ ವರ್ಗಾವಣೆ ಮಾಡಲಾಗಿದೆ ಎಂದು ಸಿಂಧೂರಿ ಹೇಳುದ್ದಾರೆ.
ಇನ್ನು ಮೈಸೂರಿನ ಭೂ ಹಗರಣಕ್ಕೆ ಸಂಬಂಧಿಸಿದಂತೆ ಪೂರ್ಣ ದಾಖಲೆಗಳು ನನ್ನ ಬಳಿ ಇವೆ ಎಂದಿರುವ ರೋಹಿಣಿ ಕೆಲವು ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ ಎನ್ನಲಾಗಿದೆ. ಮೈಸೂರಿನ ಎಲ್ಲ ಪ್ರಭಾವಿ ರಾಜಕಾರಣಿಗಳು ನನ್ನ ವಿರುದ್ಧ ಎಷ್ಟೇ ಹೋರಾಡಿದರು, ಮುಂದೊಂದು ದಿನ ಭೂಹಗರಣದ ವಿಷಯದಲ್ಲಿ ಜಯ ನನ್ನದಾಗಲಿದೆ ಎಂದಿದ್ದಾರೆ. ಸಿಂಧೂರಿ ವರ್ಗಾವಣೆ 2 ದಿನಗಳ ಹಿಂದೆ ಭೂ ಹಗರಣಕ್ಕೆ ಸಂಬಂಧಿಸಿದಂತೆ ಕೆಲವು ಆದೇಶಗಳನ್ನು ಹೊರಡಿಸಿದ್ದ ಬೆನ್ನಲ್ಲೇ ವರ್ಗಾವಣೆ ಆದೇಶ ಅವರ ಕೈಸೇರಿತ್ತು ಎನ್ನಲಾಗಿದೆ.