ಸಮಗ್ರ ನ್ಯೂಸ್: ತುಮಕೂರಿನ ಗುಬ್ಬಿ ಬಳಿಯಲ್ಲಿ ನೂತನ ಹೆಚ್‌ಎಎಲ್ ಘಟಕ ಆರಂಭದ ಬಳಿಕ ವೈರಲ್ ಸಂದೇಶವೊಂದು ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕೆಲಸ ಖಾಲಿ ಇದೆ, ಐಟಿಐ, ಡಿಪ್ಲೋಮಾ ಮಾಡಿದವರು ಅರ್ಜಿ ಸಲ್ಲಿಸಿ ಎಂಬುದಾಗಿ ಕೆಲ ನಂಬರ್ ನೀಡಿ ಶೇರ್ ಮಾಡಲಾಗುತ್ತಿದೆ.
ಆದರೆ ಇದು ಅಸಲಿ ಕೆಲಸ ನೀಡುವ ಸಂದೇಶವೆಂದು ತಿಳಿದುಕೊಂಡರೆ ನೀವು ಮೋಸ ಹೋಗ್ತೀರಿ.
ಈ ಕುರಿತಂತೆ ರಾಜ್ಯ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರುಳೀಧರ ಹಾಲಪ್ಪ ಮಾಹಿತಿ ಬಿಡುಗಡೆ ಮಾಡಿದ್ದು, ತುಮಕೂರು ಜಿಲ್ಲೆಯ ಗುಬ್ಬಿ ಬಳಿ HAL ಘಟಕ ಲೋಕಾರ್ಪಣೆಗೊಂಡಿದ್ದು, ಇದನ್ನೇ ನೆಪವಾಗಿಟ್ಟುಕೊಂಡಿರುವ ಕೆಲವು ವಂಚಕರು ಹೆಚ್.ಎ.ಎಲ್. ಕೆಲಸಕ್ಕೆ ಅರ್ಜಿ ಆಹ್ವಾನಿಸಲಾಗಿದೆ. ಕೂಡಲೇ ಸಂಪರ್ಕಿಸಿ ಎಂದು ಸಾಮಾಜಿಕ ಜಾಲತಾಣದಲ್ಲಿ ಸಂದೇಶ ರವಾನಿಸುತ್ತಿದ್ದಾರೆ ಎಂದಿದ್ದಾರೆ.
ಕಳೆದ ಒಂದು ವಾರದಿಂದ ಕೆಲವರು ಈ ದಂಧೆಗೆ ಇಳಿದಿದ್ದು ಹೆಚ್.ಎ.ಎಲ್ ಘಟಕಕ್ಕೆ ಐಟಿಐ, ಡಿಪ್ಲೊಮಾ ಆಗಿರುವವರು ಯಾರಾದರೂ ಇದ್ದಲ್ಲಿ ಅರ್ಜಿ ಸಲ್ಲಿಸಿ, ಸ್ಥಳೀಯರು ಮತ್ತು ನಿಮ್ಮ ಅಕ್ಕಪಕ್ಕದವರಿಗೆ ತಿಳಿಸಿ. ನಮ್ಮವರು ಪ್ರಯತ್ನ ಪಡೆಯದೆ ಹೋದರೆ ಉತ್ತರ ಭಾರತದ ರಾಜ್ಯಗಳಿಂದ ಕೆಲಸಕ್ಕೆ ಬರುತ್ತಾರೆ, ಕನ್ನಡಿಗರು ಉದ್ಯೋಗದಿಂದ ವಂಚಿತರಾಗುತ್ತಾರೆ. ಆದ ಕಾರಣ ಕನ್ನಡಿಗರಿಗೆ ಮೊದಲ ಆದ್ಯತೆ ಸಿಗಬೇಕು ಎಂದೆಲ್ಲಾ ಬರೆದುಕೊಂಡು ವಾಟ್ಸಪ್, ಫೇಸ್‌ಬುಕ್ ಗಳಲ್ಲಿ ಹರಿಯಬಿಡುತ್ತಿದ್ದಾರೆ. ವ್ಯವಸ್ಥಾಪಕ ಶಿವಕುಮಾರ್ ಎಂಬ ಹೆಸರು ಸೇರಿದಂತೆ ಇತರೆ ಕೆಲವರ ಹೆಸರು ಹಾಕಿಕೊಂಡು ಒಂದೆರಡು ಮೊಬೈಲ್ ಸಂಖ್ಯೆಗಳನ್ನೂ ಸಹ ಅದರಲ್ಲಿ ನಮೂದಿಸಿದ್ದಾರೆ ಎಂದು ಹೇಳಿದ್ದಾರೆ.
ಈಗಾಗಲೇ ಉದ್ಯೋಗ ಕಳೆದುಕೊಂಡಿರುವವರು, ಉದ್ಯೋಗದ ನಿರೀಕ್ಷೆಯಲ್ಲಿರುವವರು, ಐಟಿಐ ಪಾಸ್ ಆಗಿರುವವರು, ಉದ್ಯೋಗಕ್ಕಾಗಿ ಕಾಯುತ್ತಿರುತ್ತಾರೆ. ಯಾವುದದಾದರೂ ಕಂಪನಿ ಅಥವಾ ಉದ್ದಿಮೆಗಳಲ್ಲಿ ಅವಕಾಶ ಸಿಕ್ಕರೆ ಸಾಕು ಎಂಬ ಮನಸ್ಥಿತಿ ಅವರಲ್ಲಿರುತ್ತದೆ. ಇದನ್ನೇ ಬಂಡವಾಳ ಮಾಡಿಕೊಳ್ಳುವ ಕೆಲವು ವಂಚಕರು ತಮ್ಮ ಮೊಬೈಲ್ ಸಂಖ್ಯೆಗಳನ್ನು ಹಾಕಿಕೊಂಡು ಹಣ ಪೀಕುವ ದಂಧೆಗೆ ಇಳಿದಿದ್ದಾರೆ ಎಂದು ಕಿಡಿಕಾರಿದ್ದಾರೆ.
ಇಂತಹ ಸಂದೇಶಗಳನ್ನು ನಂಬಿ ಉದ್ಯೋಗ ಅಕಾಂಕ್ಷಿಗಳು ವಂಚನೆಗಳೊಗಾಗಬಾರದೆಂದು ಎಂಬುದಾಗಿ ಉದ್ಯೋಗಾಕಾಂಕ್ಷಿಗಳಿಗೆ ಕೌಶಲ್ಯ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಮುರಳೀಧರ ಹಾಲಪ್ಪ ಎಚ್ಚರಿಸಿದ್ದಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವಂತ ಗುಬ್ಬಿ ಬಳಿಯ ಹೆಚ್ ಎಎಲ್ ಘಟಕದಲ್ಲಿ ಕೆಲಸ ಖಾಲಿ ಇದೆ ಎನ್ನುವ ಸಂದೇಶ ಸುಳ್ಳು. ಆ ಸಂಖ್ಯೆಗಳಿಗೆ ಸಂಪರ್ಕಿಸೋ ಮುನ್ನ ಎಚ್ಚರಿಕೆ ವಹಿಸಲು ಮರೆಯಬೇಡಿ.