ಸಮಗ್ರ ನ್ಯೂಸ್: ಅಳಿಯನ ಅಪಹರಣ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಕಾಂಗ್ರೆಸ್ ನಾಯಕಿ, ಸಮಾಜ ಕಲ್ಯಾಣ ಮಂಡಳಿಯ ಮಾಜಿ ಅಧ್ಯಕ್ಷೆ ದಿವ್ಯಪ್ರಭಾ ಚಿಲ್ತಡ್ಕ ಸೇರಿದಂತೆ ಆರು ಮಂದಿ ವಿರುದ್ಧ ಬೆಂಗಳೂರಿನ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತನ್ನನ್ನು ಅಪಹರಣ ಮಾಡಿ, ಚಿತ್ರಹಿಂಸೆ ನೀಡಿದ್ದಾರೆ ಎಂದು ಆರೋಪಿಸಿ ಅಳಿಯ ನವೀನ್ ಗೌಡ ನೀಡಿದ ದೂರಿನಂತೆ ದಿವ್ಯಪ್ರಭಾ, ಅವರ ಪುತ್ರಿ ಸ್ಪಂದನಾ(ನವೀನ್ ಪತ್ನಿ), ದಿವ್ಯಪ್ರಭಾರ ಪತಿ ಪರಶುರಾಮ ಸೇರಿ ಆರು ಜನರ ಮೇಲೆ ಎಫ್.ಐ.ಆರ್. ದಾಖಲು ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ದಿವ್ಯಾಪ್ರಭಾ ಅವರ ಪುತ್ರಿ ಸ್ಪಂದನಾರನ್ನು ಮದುವೆಯಾಗಿದ್ದ ನವೀನ್ ಗೌಡ, ಇತ್ತೀಚೆಗೆ ಕೆಲವು ಕೌಟುಂಬಿಕ ಕಾರಣಗಳಿಂದ ಪತಿ-ಪತ್ನಿ ಇಬ್ಬರೂ ದೂರವಾಗಿದ್ದರೆನ್ನಲಾಗಿದೆ. ಇದೇ ಕಾರಣಕ್ಕೆ ತನ್ನನ್ನು ಮನೆಯಿಂದ ಅಪಹರಣ ಮಾಡಿದ್ದಾರೆ. ನಂತರ ಜೆ.ಪಿ. ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಮಾನಸಿಕ ಅಸ್ವಸ್ಥನೆಂದು ಬಿಂಬಿಸಲು ಪ್ರಯತ್ನಪಟ್ಟಿದ್ದಾರೆ ಎಂದು ದೂರಿನಲ್ಲಿ ನವೀನ್ ಗೌಡ ಉಲ್ಲೇಖ ಮಾಡಿದ್ದರು.
ಈ ಸಂಬಂಧ ಪುಟ್ಟೇನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.