ಸಮಗ್ರ ನ್ಯೂಸ್: ದೇಶಾದ್ಯಂತ ಹಠಾತ್ ಹೃದಯಾಘಾತ, ಕುಸಿದು ಬಿದ್ದು ಸಾಯುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿರುವ ಬೆನ್ನಿಗೇ ಆತಂಕಕಾರಿ ಸಂಗತಿಯೊಂದು ಹೊರಬಿದ್ದಿದೆ. ಭಾರತದಲ್ಲಿ ಕೋವಿಶೀಲ್ಡ್ ಲಸಿಕೆಯನ್ನು ಕೊಡಬಾರದಿತ್ತು ಎಂಬುದಾಗಿ ಬ್ರಿಟಿಷ್-ಇಂಡಿಯನ್ ಕಾರ್ಡಿಯಾಲಜಿಸ್ಟ್ ಅಭಿಪ್ರಾಯ ಪಟ್ಟಿದ್ದಾರೆ.
ಖ್ಯಾತ ಬ್ರಿಟಿಷ್-ಇಂಡಿಯನ್ ಕಾರ್ಡಿಯಾಲಜಿಸ್ಟ್ ಡಾ.ಅಸೀಮ್ ಮಲ್ಹೋತ್ರಾ ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೃದಯಾಘಾತ ಹಾಗೂ ಸ್ಟ್ರೋಕ್ಗಳಿಗೆ ಸಂಬಂಧಿಸಿದಂತೆ ಹೇಳುವುದಾದರೆ ಸೀರಮ್ ಇನ್ಸ್ಟಿಟ್ಯೂಟ್ನಿಂದ ಭಾರತದಲ್ಲಿ ತಯಾರಿಸಲಾದ ಲಸಿಕೆ ಎಂಆರ್ಎನ್ಎ ಕೋವಿಡ್-19 ಲಸಿಕೆಗಳಿಗಿಂತಲೂ ಕಳಪೆಯಾಗಿದೆ ಎಂದು ಹೇಳಿದ್ದಾರೆ.
ಆಕ್ಸ್ಫರ್ಡ್-ಆಸ್ಟ್ರಜೆನೆಕಾದ ಲಸಿಕೆ ಭಾರತದಲ್ಲಿ ಪರಿಚಯಿಸಲಾದ ಮೊದಲ ಲಸಿಕೆಗಳಲ್ಲಿ ಒಂದಾಗಿದ್ದು, ಪ್ರಸ್ತುತ ಎರಡು ಡೋಸ್ ಮತ್ತು ಬೂಸ್ಟರ್ ಡೋಸ್ಗೆ ಅದನ್ನು ಅನುಮೋದಿಸಲಾಗಿದೆ. ಮತ್ತೊಂದೆಡೆ ವಿಶ್ವ ಆರೋಗ್ಯ ಸಂಸ್ಥೆ ಎರಡು ವರ್ಷಗಳ ಹಿಂದೆಯೇ 18 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ಕೋವಿಶೀಲ್ಡ್ ಬಳಸಲು ಹಸಿರು ನಿಶಾನೆ ತೋರಿತ್ತು ಎಂದ ಅವರು, ದೇಶದಲ್ಲಿ ಮೊದಲನೆಯದಾಗಿ ಎಂದಿಗೂ ಲಸಿಕೆ ಕೊಡಬಾರದು, ಹೆಚ್ಚು ಲಸಿಕೆ ಕೊಟ್ಟಷ್ಟೂ ಗಂಭೀರ ಅಡ್ಡಪರಿಣಾಮದ ಸಾಧ್ಯತೆ ಜಾಸ್ತಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಎಂಆರ್ಎನ್ಎ ಕೋವಿಡ್-19 ಲಸಿಕೆ ಸ್ಥಗಿತಗೊಳಿಸುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಮುಂಚೂಣಿಯಲ್ಲಿರುವವರಲ್ಲಿ ಒಬ್ಬರಾಗಿರುವ ಡಾ.ಅಸೀಮ್ ಮಲ್ಹೋತ್ರ, ಕೋವಿಶೀಲ್ಡ್ ಬಳಕೆಯ ಬಗ್ಗೆ ಸಂಪೂರ್ಣ ಸುರಕ್ಷತಾ ಪರಿಶೀಲನೆಯನ್ನು ಒತ್ತಾಯಿಸಿದ್ದಾರೆ. ಮಾತ್ರವಲ್ಲ ಆಸ್ಟ್ರಾಜೆನೆಕಾದ ಕೋವಿಶೀಲ್ಡ್ ಲಸಿಕೆಯನ್ನು ಯುಕೆ ಹಾಗೂ ಇತರ ಕೆಲವು ಯುರೋಪಿಯನ್ ದೇಶಗಳಲ್ಲಿ ಗಂಭೀರ ಅಡ್ಡಪರಿಣಾಮದ ಹಿನ್ನೆಲೆಯಲ್ಲಿ ತಡೆಹಿಡಿದಿದ್ದಾಗ ಭಾರತದಲ್ಲಿ ಏಕೆ ಕೊಡಲಾಯಿತು? ಎಂದೂ ಪ್ರಶ್ನಿಸಿದ್ದಾರೆ.
ಆಕ್ಸ್ಫರ್ಡ್ ಆಸ್ಟ್ರಾಜೆನೆಕಾದ ಲಸಿಕೆ ಕುರಿತಂತೆ ಹಲವಾರು ಪ್ರತಿಕೂಲ ವರದಿಗಳು ಬಂದಿವೆ. 97 ಲಕ್ಷ ಡೋಸ್ಗಳ ಪೈಕಿ ಗಂಭೀರ ಅಡ್ಡಪರಿಣಾಮಗಳ ಕುರಿತು 8 ಲಕ್ಷ ವರದಿಗಳು ಬಂದಿವೆ ಎಂದಿದ್ದಾರೆ. ದೇಶದಲ್ಲಿ ಈಗಾಗಲೇ ಶೇ.90ಕ್ಕೂ ಅಧಿಕ ಮಂದಿ ಕೋವಿಡ್ಗೆ ತೆರೆದುಕೊಂಡಿದ್ದು, ಸಹಜ ರೋಗನಿರೋಧಕ ಶಕ್ತಿ ಬೆಳೆದಿದೆ. ಹೀಗಾಗಿ ಭಾರತದಲ್ಲಿ ಇನ್ನು ಲಸಿಕೆ ಅಗತ್ಯವಿಲ್ಲ, ಮಾತ್ರವಲ್ಲ ಬೂಸ್ಟರ್ ಡೋಸ್ ಕೊಡಬೇಕಾಗಿಯೂ ಇಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.