ಸಮಗ್ರ ನ್ಯೂಸ್: ಕಟೀಲು ಸಮೀಪದ ನಿಡ್ಡೋಡಿಯಲ್ಲಿ ಬಾವಿಯೊಳಗೆ ಬಿದ್ದಿದ್ದ ಸುಮಾರು ಒಂದು ವರ್ಷ ಪ್ರಾಯದ ಹೆಣ್ಣು ಚಿರತೆಯನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಜ್ಞ ವೈದ್ಯರು ಮತ್ತು ಸ್ಥಳೀಯರ ನೆರವಿನಲ್ಲಿ ಕಾರ್ಯಾಚರಣೆ ನಡೆಸಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಡಾ ಮೇಘನಾ ಪೆಮ್ಯಯ್ಯ, ಡಾ.ಯಶಸ್ವಿ ನಾರಾವಿ, ಡಾ ಪೃಥ್ವಿ ಮತ್ತು ಡಾ. ನಫೀಸಾ ನೇತೃತ್ವದ ಮಂಗಳೂರಿನ ಚಿಟ್ಟೆಪಿಲಿ ರಕ್ಷಣಾ ತಂಡವು ಅರಣ್ಯ ಅಧಿಕಾರಿಗಳು ಮತ್ತು ಸ್ಥಳೀಯರ ಸಹಾಯದಿಂದ ಚಿರತೆಯನ್ನು ರಕ್ಷಿಸಿ ಕಾಡಿಗೆ ಬಿಟ್ಟಿದ್ದಾರೆ.
ತುಂಬಾ ಆಳವಾಗಿದ್ದ ಬಾವಿಯ ತಳಭಾಗದಲ್ಲಿ ಮಣ್ಣು ಜರಿದು ಬಿದ್ದು ಗುಹೆ ನಿರ್ಮಾಣವಾಗಿತ್ತು. ಅದೇ ಗುಹೆಯಲ್ಲಿ ಅಡಗಿದ್ದ ಚಿರತೆಯನ್ನು ತಜ್ಞ ವೈದ್ಯರಾದ ಡಾ. ಮೇಘನಾ ಬೋನಿನಲ್ಲಿ ಇಳಿದು ಬಂದೂಕಿನ ಮೂಲಕ ಅರಿವಳಿಕೆ ಔಷಧಿಯನ್ನು ಪ್ರಯೋಗಿಸಿದ್ದಾರೆ. ಬಳಿಕ ಬೋನಿನ ಮೂಲಕ ಬಾವಿಯಿಂದ ಚಿರತೆಯನ್ನು ಮೇಲಕ್ಕೆ ತರಲಾಗಿದೆ.