ಬೆಂಗಳೂರು: ರಾಜ್ಯದ ಜನತೆಗೆ ಕೋವಿಡ್ ಲಾಕ್ಡೌನ್ ನಡುವೆ ಪೆಟ್ರೋಲಿಯಮ್ ಉತ್ಪನ್ನಗಳು ಹಾಗು ಅಗತ್ಯ ವಸ್ತುಗಳ ಬೆಲೆ ಏರಿಕೆ ಸಂಕಷ್ಟ ಎದುರಿಸುತ್ತಿರುವಾಗಲೇ ವಿದ್ಯುತ್ ಬಿಲ್ ಏರಿಕೆ ಬಿಸಿ ತಟ್ಟಿದೆ. ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು ರಾಜ್ಯದಲ್ಲಿ ವಿದ್ಯುತ್ ದರಗಳನ್ನು ಹೆಚ್ಚಿಸಲು ಅನುಮೋದನೆ ನೀಡಿದೆ. ರಾಜ್ಯದ ವಿವಿಧ ವಿದ್ಯುತ್ ವಿತರಣಾ ಕಂಪನಿಗಳು 135 ಪೈಸೆ (₹1.35) ಬೆಲೆ ಏರಿಕೆ ಕೋರಿ ಬಹಳ ಹಿಂದೆಯೇ ಪ್ರಸ್ತಾವ ಸಲ್ಲಿಸಿದ್ದವು. ಈ ಪ್ರಸ್ತಾವಗಳನ್ನು ಕೂಲಂಕಶ ಪರಿಶೀಲಿಸಿರುವ ಆಯೋಗವು ಸರಾಸರಿ 30 ಪೈಸೆ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ.
ಪರಿಷ್ಕೃತ ದರಗಳು ಏಪ್ರಿಲ್ 1, 2021ರ ನಂತರದ ಮೊದಲ ಮೀಟರ್ ಓದುವ ದಿನಾಂಕದಿಂದ ಬಳಕೆ ಮಾಡುವ ವಿದ್ಯುಚ್ಛಕ್ತಿಗೆ ಅನ್ವಯವಾಗುತ್ತದೆ. ವಿದ್ಯುತ್ ಸರಬರಾಜು ಕಂಪನಿಗಳು ಪ್ರತಿ ಯೂನಿಟ್ಗೆ 83ರಿಂದ 168 ಪೈಸೆಗಳಷ್ಟು ಹೆಚ್ಚಳ ಕೋರಿದ್ದವು. ಪ್ರಸ್ತಾವನೆಗಳನ್ನು ಪರಿಶೀಲಿಸಿದ ಆಯೋಗವು ಶೇ 3.84ರ ದರ ಹೆಚ್ಚಳಕ್ಕೆ ಅನುಮೋದನೆ ನೀಡಿದೆ. ಇದರಂತೆ ಏಕರೂಪದಲ್ಲಿ 30 ಪೈಸೆಗಳಷ್ಟು ದರ ಹೆಚ್ಚಳವಾಗಲಿದೆ.
ಇದರ ಜೊತೆಗೆ ಎಚ್ಟಿ ಕೈಗಾರಿಕೆಗಳಲ್ಲಿ ಬೆಳಿಗ್ಗೆ 6ರಿಂದ 10ರ ಪೀಕ್ ಅವಧಿಯ ಪ್ರತಿ ಯೂನಿಟ್ ವಿದ್ಯುತ್ ಬಳಕೆಗೆ ವಿಧಿಸುತ್ತಿದ್ದ ₹ 1ರ ದಂಡವನ್ನು ಹಿಂಪಡೆಯಲಾಗಿದೆ. ಎಲ್ಟಿ ಮಂಜೂರಾತಿ ಮಿತಿಯನ್ನು 150 ಕಿಲೋವ್ಯಾಟ್ಗೆ ಹೆಚ್ಚಿಸಲಾಗಿದೆ. ಗೃಹಬಳಕೆ ವಿಭಾಗದಲ್ಲಿ ಮೊದಲ ಹಂತವನ್ನು (First Slab) 30 ಯೂನಿಟ್ಗಳಿಂದ 50 ಯೂನಿಟ್ಗಳಿಗೆ ಹೆಚ್ಚಿಸಲಾಗಿದೆ. ಸಾರ್ವಜನಿಕ ಬೀದಿದೀಪಗಳಲ್ಲಿ ಎಲ್ಇಡಿ ಬಲ್ಬ್ ಬಳಕೆಗೆ ಪ್ರತಿ ಯೂನಿಟ್ಗೆ ₹1.05 ರಿಯಾಯ್ತಿ ಮುಂದುವರಿಸಲಾಗುವುದು ಎಂದು ಆಯೋಗವು ಸ್ಪಷ್ಟಪಡಿಸಿದೆ.