ಸಮಗ್ರ ನ್ಯೂಸ್: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಾಯಿ ತಪ್ಪಿ ಏನಾದರೂ ಒಂದು ಯಡವಟ್ಟು ಮಾಡಿಕೊಳ್ಳುತ್ತಲೇ ಇರುತ್ತಾರೆ. ನಿನ್ನೆಯೂ ಕೂಡ ಬಾಯಿತಪ್ಪಿ ಬಿಜೆಪಿಗೆ ಮತ ಹಾಕಿ ಅಂದಿರುವ ಭಾಷಣದ ತುಣುಕು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಜಯಪುರ ಜಿಲ್ಲೆಯ ಇಂಡಿ ಮತಕ್ಷೇತ್ರದಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ಅಬ್ಬರದ ಪ್ರಜಾ ಧ್ವನಿ ಯಾತ್ರೆ ನಡೆಯಿತು. ಸಿದ್ದರಾಮಯ್ಯ ಇಂಡಿ ಕ್ಷೇತ್ರಕ್ಕೆ ಆಗಮಿಸುತ್ತಿದ್ದಂತೆ ಜನರು ಅದ್ದೂರಿ ಸ್ವಾಗತ ಕೋರಿದ್ದಾರೆ. ಯಾತ್ರೆಯಲ್ಲಿ ಅಪಾರ ಪ್ರಮಾಣದಲ್ಲಿ ಜನಸ್ತೋಮ ನೆರೆದಿದ್ದು, ಅಭೂತಪೂರ್ವ ಬೆಂಬಲ ದೊರಕಿದೆ. ಈ ವೇಳೆ ಭಾಷಣ ಮಾಡುವಾಗ ಸಿದ್ದರಾಮಯ್ಯ ಬಿಜೆಪಿಗೆ ವೋಟ್ ಹಾಕಿ, ಹಾಕಿಸಿ ಎಂದು ಬಾಯಿತಪ್ಪಿ ಹೇಳಿ ಯಡವಟ್ಟೊಂದನ್ನು ಮಾಡಿಕೊಂಡಿದ್ದಾರೆ.
ಅಂದು ವಿಜಯಪುರ ಜಿಲ್ಲೆ ಒಂದರಲ್ಲೇ 1300 ಕೋಟಿ ರೂಪಾಯಿ ಸಾಲ ಮನ್ನಾ ಆಗಿತ್ತು. ಬಿಜೆಪಿಯವರು ಒಂದು ರೂಪಾಯಿಯನ್ನೂ ಮನ್ನಾ ಮಾಡಲಿಲ್ಲ. ಇವರು ರೈತರ ಮನೆ ಹಾಳು ಮಾಡ್ತಾರೆ. ನಮ್ಮ ಸರ್ಕಾರ ಇದ್ದಾಗ 7 ಕೆಜಿ ಅಕ್ಕಿಯನ್ನು ಫ್ರೀಯಾಗಿ ನೀಡಲಾಗಿತ್ತು. ಇದೀಗ ಅದನ್ನು 5 ಕೆಜಿಗೆ ಇಳಿಸಿದ್ದಾರೆ ಎಂದು ಗುಡುಗಿದರು.
ಅದಕ್ಕೆ ನಾನು ಯಡಿಯೂರಪ್ಪಗೆ ಹೇಳಿದೆ, ಹಸಿವು ಮುಕ್ತ ಕರ್ನಾಟಕ ಮಾಡಬೇಕು ಎಂದು ನಾವು 7 ಕೆಜಿ ಅಕ್ಕಿಯನ್ನು ನೀಡಿದ್ವಿ ಅಂತಾ. ಅದಕ್ಕೆ ನಾನು ಏನ್ಮಾಡ್ಲಿ ದುಡ್ಡಿಲ್ಲ ಸರ್ಕಾರದಲ್ಲಿ ಅಂತಾ ಬಿಎಸ್ವೈ ಹೇಳಿದರು. ಅದಕ್ಕೆ ನಾನು ಹೇಳಿದೆ, ‘ನೀವು ಲೂಟಿ ಮಾಡೋದನ್ನು ಕಮ್ಮಿ ಮಾಡಿ’ ಅಂತಾ ಗೇಲಿ ಮಾಡಿದರು.
ಈಗ ಮತ್ತೆ ಹೇಳ್ತೇನೆ. ನಾವು ಅಧಿಕಾರಕ್ಕೆ ಬಂದ ಮೇಲೆ ಉಚಿತವಾಗಿ 10 ಕೆಜಿ ಅಕ್ಕಿಯನ್ನು ಉಚಿತವಾಗಿ ಕೊಡ್ತೀನಿ. ನಮ್ಮ ಮೇಲೆ ನಂಬಿಕೆ ಇದೆ ಅಲ್ವಾ..? ನಮ್ಮ ಮೇಲೆ ವಿಶ್ವಾಸ ಇದೆ ಅಲ್ವಾ.. ? ಹಾಗಿದ್ರೆ ಎಲ್ಲರೂ, ನೀವು ಬಿಜೆಪಿಗೆ ವೋಟ್ ಹಾಕಿ, ಹಾಕಿಸಿ ಅಂತಾ ಹೇಳಿದರು. ನಂತರ ತಮ್ಮ ತಪ್ಪು ಹೇಳಿಕೆಯನ್ನು ಅರ್ಥ ಮಾಡಿಕೊಂಡು ಕಾಂಗ್ರೆಸ್ಗೆ ವೋಟ್ ಹಾಕಿ ಮತ್ತು ಹಾಕಿಸಿ ಎಂದು ಮನವಿ ಮಾಡಿಕೊಂಡರು.