ದೇಶಬಿಟ್ಟು ಪರಾರಿಯಾಗಿರುವ ವಿವಾದೀತ ದೇವಮಾನವ ಸ್ವಾಮಿ ನಿತ್ಯಾನಂದ ಈಕ್ವೆಡಾರ್‌ನಲ್ಲಿ ಖಾಸಗಿ ಭೂಮಿಯನ್ನೇ ದೇಶವನ್ನಾಗಿ ಪರಿವರ್ತಿಸಿಕೊಂಡು ಅದಕ್ಕೆ ತಮ್ಮದೇ ಪ್ರಧಾನಿ ಮತ್ತು ಮಂತ್ರಿಮಂಡಲವನ್ನು ರಚಿಸಿಕೊಂಡಿರುವುದು ಗೊತ್ತಿರುವ ವಿಚಾರ.
ಇದಲ್ಲದೇ, ಆ ದೇಶಕ್ಕೆ ‘ಕೈಲಾಸ’ ಎಂಬ ಹೆಸರು ಇಟ್ಟಿದ್ದು, ಅದನ್ನು ‘ಮಹಾನ್ ಹಿಂದೂ ರಾಷ್ಟ್ರ’ ಎಂದೂ ಕರೆದುಕೊಂಡಿದ್ದೂ ಆಗಿದೆ. ಹಿಂದೂಯಿಸಂನಲ್ಲಿನ ಪುನರ್ಜನ್ಮದಲ್ಲಿ ತಾನೇ ಪರಮಶಿವನ ಅವತಾರ ಎಂದು ನಿತ್ಯಾನಂದ ಹೇಳಿಕೊಂಡಿದ್ದ.
ಆದರೆ, ನಮ್ಮ ದೇಶದಲ್ಲಿ ಈತನಿಗೆ ಆಶ್ರಯ ಕೊಟ್ಟಿಲ್ಲ ಎಂದು ಈಕ್ವೆಡಾರ್ ಹೇಳಿತ್ತು.
ಈಕ್ವೆಡಾರ್ ಬಿಟ್ಟು ಹೈಟಿಗೆ ನಿತ್ಯಾನಂದ ತೆರಳಿದ್ದ ಎಂದು ಈಕ್ವೆಡಾರ್ ರಾಯಭಾರ ಕಚೇರಿ ಹೇಳಿಕೆ ನೀಡುವ ಮೂಲಕ ಸ್ಪಷ್ಟನೆಯನ್ನು ನೀಡಿತ್ತು.
ಸದಾ ಒಂದಲ್ಲಾ ಒಂದು ವಿವಾದಕಾರಿ ವಿಡಿಯೋ ಮೂಲಕ ಪ್ರಚಲಿತದಲ್ಲಿರುವ ನಿತ್ಯಾನಂದ, ಎರಡು ದಿನಗಳ ಹಿಂದೆ ಹೊಸ ವಿಡಿಯೋ ಸಂದೇಶವೊಂದರಲ್ಲಿ, ತಾನು ಭಾರತಕ್ಕೆ ಬಂದರೆ ಮಾತ್ರ ಕೊರೊನಾ ಅಂತ್ಯವಾಗುವುದು ಎಂದು ಹೇಳಿರುವುದು ದಾಖಲಾಗಿದೆ.
ಕೊರೊನಾ ಮೊದಲನೇ ಅಲೆಯ ವೇಳೆ, ಮಾಧ್ಯಮಗಳಿಗೆ ಈ ಮೇಲ್ ಮೂಲಕ ಪತ್ರಿಕಾ ಪ್ರಕಟಣೆ ನೀಡಿದ್ದ ನಿತ್ಯಾನಂದ ಸ್ವಾಮಿ, ಕೊರೊನಾ ಹೊಡೆದೊಡಿಸಲು, ಕೊರೊನಾ ಬರದಂತೆ ತಡೆಯಲು 28 ದಿನಗಳ ಪಚ್ಚೈ ಪತ್ತಿನಿ ಎಂಬ ಮಹಾ ವೃತ ಆರಂಭಿಸಿರುವುದಾಗಿ ಹೇಳಿದ್ದರು. 28 ದಿನ ಘೋರ ಉಪವಾಸ ಕೈಗೊಳ್ಳುವುದು ಈ ಪಚ್ಚೈ ಪತ್ತಿನಿ ವೃತದ ಸಂಕ್ಷಿಪ್ತ ರೂಪ. ಇದಕ್ಕೆ ಕೊರೊನಾಕ್ಕಿಂತಲೂ ಬಲಶಾಲಿಯಾದ ರೋಗ ಹೋಗಲಾಡಿಸುವ ಶಕ್ತಿ ಇದೆ ಎಂದು ನಿತ್ಯಾನಂದ ಸ್ವಾಮಿ ಹೇಳಿಕೊಂಡಿದ್ದರು.
ಕೊರೊನಾ ಎರಡನೇ ಅಲೆಯ ಪ್ರಭಾವ ದಿನದಿಂದ ದಿನಕ್ಕೆ ಕಮ್ಮಿಯಾಗುತ್ತಿರುವ ಈ ಹೊತ್ತಿನಲ್ಲಿ ನಿತ್ಯಾನಂದ ಹೊಸ ವಿಡಿಯೋ ಸುದ್ದಿ ಮಾಡುತ್ತಿದೆ. ತಾನು ಭಾರತದ ನೆಲವನ್ನು ಸ್ಪರ್ಶಿಸಿದಾಗ ಮಾತ್ರ ಕೊರೊನಾ ಮಹಾಮಾರಿ ಅಂತ್ಯಗೊಳ್ಳುವುದು ಎಂದು ಸ್ವಾಮಿ ನಿತ್ಯಾನಂದ ವಿಡಿಯೋ ಒಂದರಲ್ಲಿ ಹೇಳಿರುವುದು ದಾಖಲಾಗಿದೆ.
ಕಳೆದ ಏಪ್ರಿಲ್ ತಿಂಗಳಲ್ಲಿ ಭಾರತೀಯರಿಗೆ ಕೈಲಾಶ ಪ್ರವೇಶಕ್ಕೆ ವೀಸಾ ನೀಡುವುದಿಲ್ಲ ಎಂದು ಸ್ವಾಮಿ ನಿತ್ಯಾನಂದ ನಿರ್ಬಂಧ ವಿಧಿಸಿದ್ದರು. ಭಾರತ ಮಾತ್ರವಲ್ಲದೇ ಬ್ರೆಜಿಲ್, ಯುರೋಪಿಯನ್ ಯೂನಿಯನ್ ಮತ್ತು ಮಲೇಷ್ಯಾ ದೇಶದ ಭಕ್ತರಿಗೂ ಕೂಡ ಪ್ರವೇಶ ನಿರಾಕರಿಸಿದ್ದರು. ಕೋವಿಡ್ ಹೆಚ್ಚಳದ ಹಿನ್ನಲೆ ಈ ಕ್ರಮಕ್ಕೆ ಮುಂದಾಗಿರುವುದಾಗಿ ನಿತ್ಯಾನಂದ ತಿಳಿಸಿದ್ದ.
56 ದೇಶಗಳನ್ನು ಹೊಂದಿದ್ದ ನಮಗೆ (ಹಿಂದೂ) ಈಗ ಒಂದೂ ಉಳಿದಿಲ್ಲ. ನಾನು ಎಲ್ಲ ಶೋಷಿತ ಹಿಂದೂಗಳ ಧ್ವನಿಯಾಗಿದ್ದೇನೆ. ನಾನು ಹಿಂದೂ ದೇಶವೊಂದನ್ನು ಸ್ಥಾಪಿಸಿ ಪುನರುಜ್ಜೀವಗೊಳಿಸುತ್ತೇನೆ. ಇದು ವೇದದ ತತ್ವಗಳೊಂದಿಗೆ ನಿರ್ಮಾಣವಾಗಲಿದೆ ಎಂದು ನಿತ್ಯಾನಂದ ಹೇಳಿಕೊಂಡಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.