ಬೆಂಗಳೂರು: ತನ್ನ ಮನೆಯಲ್ಲಿ ಹಣ ಕಳವು ಆಗಿರುವ ವಿಷಯ ಕಳ್ಳರು ಪತ್ತೆಯಾದ ಮೇಲೆ ಮನೆ ಮಾಲೀಕನಿಗೆ ತಿಳಿದ ಘಟನೆ ನಗರದಲ್ಲಿ ನಡೆದಿದೆ.
ನಗರದಲ್ಲಿ ಚಿಂದಿ ಆಯುತ್ತಿದ್ದ ಬಾಂಗ್ಲಾ ಮೂಲದ ಇಬ್ಬರು ಯುವಕರು ನಗರದ ಬಾಗಲುಗುಂಟೆಯ ಎಂಎಚ್ಆರ್ ಲೇಔಟ್ ನ ಮನೆಯೊಂದರಿಂದ ಹಣ ಎಗರಿಸಿದ್ದರು. ಕಳೆದ ಮೇ 2ರಂದು ಆರೋಪಿಗಳಾದ, ಸಂಜು ಸಹಾ ಹಾಗೂ ಶುಭಂಕರ್ ಶಿಲ್ಲು ಕಳವಾದ ಮನೆಯ ಬಳಿ ತಿರುಗಾಡುತ್ತಿದ್ದಾಗ ಮನೆಗೆ ಬೀಗ ಹಾಕಿರುವುದು ಕಂಡುಬಂದಿದೆ. ಲಾಕ್ಡೌನ್ ಇರುವ ಕಾರಣ ಮನೆಮಂದಿ ಸದ್ಯ ತಿರುಗಿ ಬರಲಿಕ್ಕಿಲ್ಲ ಎಂದರಿತ ಕದೀಮರು ನಕಲಿಸಿ ಒಳ ಹೊಕ್ಕಿದ್ದಾರೆ. ಆ ಸಂಧರ್ಭ ಮನೆ ಮಾಲಿಕ ಈರಪ್ಪ ಎಂಬವರು ಮನೆಯಲ್ಲಿ 90 ಲಕ್ಷ ರೂ ನಗದು ಇರಿಸಿ ಚಿಂತಾಮಣಿ ಯಲ್ಲಿರುವ ಮಗಳ ಮನೆಗೆ ತೆರಳಿದ್ದರು. ಮನೆಯಿಂದ ನಗದು ಎತ್ತಿಕೊಂಡ ಕಳ್ಳರು ಬೆಂಗಳೂರಿನಿಂದ ಬಾಡಿಗೆ ಕಾರು ಗೊತ್ತುಪಡಿಸಿ ತವರು ತವರಿಗೆ ಪರಾರಿಯಾಗಲು ಕಲ್ಕತ್ತಾಗೆ ಹೊರಟಿದ್ದರು. ಆಂಧ್ರಪ್ರದೇಶ ಗಡಿಯಲ್ಲಿ ತಪಾಸಣೆ ನಡೆಸುತ್ತಿದ್ದ ಪೊಲೀಸರು ಆರೋಪಿಗಳ ಬಳಿ ಇಷ್ಟೊಂದು ಹಣ ಕಂಡು ವಿಚಾರಿಸಿದ್ದಾರೆ. ಈ ವೇಳೆ ಆರೋಪಿಗಳು ಹೆದರಿ ಕಳ್ಳತನ ಮಾಡಿರುವ ವಿಷಯ ಒಪ್ಪಿಕೊಂಡಿದ್ದಾರೆ. ತಕ್ಷಣ ಆಂಧ್ರಪ್ರದೇಶ ಪೊಲೀಸರು ಬೆಂಗಳೂರು ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಬೆಂಗಳೂರು ಪೊಲೀಸರು ಕಳ್ಳರ ಮುಖಾಂತರ ಕಳವಾದ ಮನೆ ಪತ್ತೆ ಹಚ್ಚಿ ಮನೆ ಮಾಲೀಕರನ್ನು ಸಂಪರ್ಕಿಸಿದ್ದಾರೆ.
ಅಚ್ಚರಿಯ ವಿಷಯವೆಂದರೆ ಪೊಲೀಸರ ಕರೆ ಬರುವವರೆಗೂ ಮನೆ ಮಾಲಿಕ ಈರಪ್ಪ ಅವರಿಗೆ ಮನೆಯಿಂದ ನಗದು ಕಳವಾದ ವಿಷಯ ತಿಳಿದಿರಲಿಲ್ಲ. ಏಕೆಂದರೆ ಆರೋಪಿಗಳು ನಕಲಿ ಕಿ ಬಳಸಿ ಒಳಹೊಕ್ಕಿದ್ದರು. ಮತ್ತು ತಮಗೆ ನಿರೀಕ್ಷೆಗೂ ಮೀರಿ ಹಣ ಸಿಕ್ಕಿದ ಖುಷಿಯಲ್ಲಿ ಮನೆಯಲ್ಲಿರುವ ಬೇರೆ ಯಾವ ವಸ್ತುವನ್ನು ಮುಟ್ಟದೆ ಪುನಹ ಮನೆ ಲಾಕ್ ಮಾಡಿ ತೆರಳಿದ್ದರು. ಇದೀಗ ಕಳ್ಳರು ಪೊಲೀಸರ ಅತಿಥಿಯಾಗಿದ್ದು. ನಗದು ಮಾಲೀಕರ ಕೈಸೇರಿದೆ.