ಸಮಗ್ರ ನ್ಯೂಸ್: ಕನ್ನಡದ ಖ್ಯಾತ ಕತೆಗಾರ, ಕವಿ ವಿಮರ್ಶಕ ಕೆ.ವಿ. ತಿರುಮಲೇಶ್ (82) ಕೆಲಕಾಲದ ಅಸೌಖ್ಯದಿಂದ ಬಳಲುತ್ತಿದ್ದು, ಇಂದು(ಜ.30) ಮುಂಜಾನೆ ಹೈದರಾಬಾದಿನ ತಮ್ಮ ಮಗಳ ನಿವಾಸದಲ್ಲಿ ನಿಧನರಾಗಿದ್ದಾರೆ.
ಕೇರಳದ ಕಾಸರಗೋಡು ಜಿಲ್ಲೆಯ ಕಾರಡ್ಕ ಗ್ರಾಮದಲ್ಲಿ 1940ರ ಸೆಪ್ಟೆಂಬರ್ 12ರಂದು ಜನಿಸಿದ ತಿರುಮಲೇಶ್ ಇವರು ಕನ್ನಡ ಭಾಷೆಯ ಬಹು ಮುಖ್ಯ ಕವಿ, ಕತೆಗಾರ, ಭಾಷಾ ವಿಜ್ಞಾನಿ, ವಿದ್ವಾಂಸ ಹಾಗೂ ವಿಮರ್ಶಕರಾಗಿ ಗುರುತಿಸಿಕೊಂಡಿದ್ದರು.
ಕೆ.ವಿ. ತಿರುಮಲೇಶ್ ಕನ್ನಡದ ನವ್ಯಸಾಹಿತ್ಯದ ಸಂದರ್ಭದಲ್ಲಿ ಬರೆಯಲು ತೊಡಗಿದವರು. ಸುಮಾರು ಐದು ದಶಕಗಳ ಕಾಲ ಕವಿತೆ, ಕತೆ, ವಿಮರ್ಶೆ ಅನುವಾದ ಕ್ಷೇತ್ರಗಳಲ್ಲಿ ಕೆಲಸ ಮಾಡಿಕೊಂಡು ಬಂದಿದ್ದಾರೆ. ‘ಮುಖವಾಡಗಳು’ ಹಾಗೂ ‘ವಠಾರ’ ಇವರ ಎರಡು ಜನಪ್ರಿಯ ಕೃತಿಗಳು. ಇವರ 20 ಪ್ರಕಟಿತ ಕೃತಿಗಳಲ್ಲಿ ಅವಧ, ವಠಾರ, ಮುಖವಾಡಗಳು, ಪಾಪಿಯೂ ಎಂಬುವು ಮುಖ್ಯ ಕವನ ಸಂಕಲನಗಳು. ಆರೋಪ, ಮುಸುಗು ಇವರ ಕೆಲ ಕಾದಂಬರಿಗಳು. ಬೇಂದ್ರೆಯವರ ಕಾವ್ಯಶೈಲಿ, ನಮ್ಮ ಕನ್ನಡ, ಅಸ್ತಿತ್ವವಾದ ಇವು ಇವರ ಮುಖ್ಯ ವಿಮರ್ಶಾ ಕೃತಿಗಳು. ಮಾಲ್ಟ ಲೌರಿಡ್ಜ್ ಬ್ರಿಗ್ಗನ ಟಿಪ್ಪಣಿ ಪುಸ್ತಕ ಇವರ ಅನುವಾದಿತ ಕೃತಿ.ತಿರುಮಲೇಶರು ಪ್ರಸ್ತುತ ಅಮೇರಿಕದ ಅಯೋವ ವಿಶ್ವವಿದ್ಯಾನಿಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದರು.
ಕರ್ನಾಟಕ ಸಾಹಿತ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ,ನಿರಂಜನ ಪ್ರಶಸ್ತಿಯೂ ಸೇರಿದಂತೆ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳು ಇವರಿಗೆ ಸಂದಿವೆ. ಹೈದರಾಬಾದಿನ ಸಿ.ಐ.ಇ.ಎಫ್.ಎಲ್. (ಈಗ ಇ.ಎಫ್.ಎಲ್.ಯು.) ವಿಶ್ವವಿದ್ಯಾಲಯದಲ್ಲಿ ಭಾಷಾ ವಿಜ್ಞಾನದ ಪ್ರೊಫಸರರಾಗಿ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿದ್ದಾರೆ. ಕನ್ನಡದ ವಾಕ್ಯರಚನೆಯ ಕುರಿತು ಮತ್ತು ಕರ್ಮಣೀ ಪ್ರಯೋಗದ ನಿಯೋಗಗಳ ಕುರಿತು ಕ್ರಮಬದ್ಧವಾದ, ಸೂಕ್ಷ್ಮ ಒಳನೋಟಗಳನ್ನೊಳಗೊಂಡ ಭಾಷಾವೈಜ್ಞಾನಿಕ ಅಧ್ಯಯನ ಅವರ ಪಿ.ಎಚ್ ಡಿ. ಪ್ರಬಂಧ. ಬೇಂದ್ರೆಯವರ ಶೈಲಿಯ ಬಗ್ಗೆಯೂ ಮತ್ತಿತರ ಭಾಷಾಸಂಬಂಧಿ ವಿಷಯಗಳನ್ನು ಕುರಿತೂ ಹಲವಾರು ಲೇಖನಗಳನ್ನೂ, ಒಂದು ಲೇಖನ ಸಂಗ್ರಹವನ್ನೂ ಪ್ರಕಟಿಸಿದ್ದಾರೆ. ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿ ಅತ್ಯುತ್ತಮವಾದುದ್ದನ್ನೇ ಬರೆದಿರುವ ಇವರು ಕನ್ನಡ ಭಾಷೆ ಮತ್ತು ವ್ಯಾಕರಣದ ಮೇಲೆ ಬಹಳ ಆಳವಾದ ಹಿಡಿತವನ್ನು ಹೊಂದಿದ್ದರು.