ಸಮಗ್ರ ನ್ಯೂಸ್: ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದ ಪತ್ನಿಯ ನರಳಾಟ ನೋಡಲಾಗದೇ, ಆಕೆಯನ್ನು ಉಸಿರುಗಟ್ಟಿಸಿ ಸಾಯಿಸಿದ ಪತಿ ತಾನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳೂರಿನ ಉರ್ವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಬಿಜೈ ಕಾಪಿಕಾಡ್ ನಾಲ್ಕನೇ ರಸ್ತೆ ಬಳಿಯ ಪೂನಂ ಪಾರ್ಕ್ ಅಪಾರ್ಟ್‌ಮೆಂಟ್ ಸಮುಚ್ಚಯದ ನಿವಾಸಿ ಶೈಲಜಾ ರಾವ್ (64) ಹಾಗೂ ಅವರ ಪತಿ ದಿನೇಶ್ ರಾವ್ (67)ಮೃತ ದುರ್ದೈವಿಗಳು.
ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳು ಇದ್ದು, ಒಬ್ಬಾಕೆ ಮದುವೆಯ ಬಳಿಕ ಅಮೆರಿಕದಲ್ಲಿ ನೆಲೆಸಿದ್ದು, ಇನ್ನೊಬ್ಬ ಮಗಳು ಮದುವೆ ಬಳಿಕ ಮೈಸೂರಿನಲ್ಲಿ ನೆಲೆಸಿದ್ದಾರೆ. ಅಪಾರ್ಟ್‌ಮೆಂಟ್ ಸಮುಚ್ಚಯದ ಮನೆಯಲ್ಲಿ ದಂಪತಿ ವಾಸಿಸುತ್ತಿದ್ದರು. ಶೈಲಜಾ ನರಸಂಬಂಧಿ ರೋಗದಿಂದ ಆರೇಳು ವರ್ಷಗಳಿಂದ ಹಾಸಿಗೆ ಹಿಡಿದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
‘ದಿನೇಶ್ ರಾವ್ ಅವರು ಈ ಹಿಂದೆ ಕೆನರಾ ಬ್ಯಾಂಕ್ ವ್ಯವಸ್ಥಾಪಕರಾಗಿದ್ದರು. ಏಳು ವರ್ಷದ ಹಿಂದೆ ನಿವೃತ್ತರಾಗಿದ್ದರು. ಪತ್ನಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರು, ಊಟ ಹಾಗೂ ನಿತ್ಯ ಕರ್ಮಗಳನ್ನು ನಿಭಾಯಿಸಲು ಪತ್ನಿಗೆ ನೆರವಾಗುತ್ತಿದ್ದರು. ಹೆಚ್ಚುವರಿ ಆರೈಕೆಗಾಗಿ ಇಬ್ಬರು ಶುಶ್ರೂಷಕಿಯರನ್ನೂ ನೇಮಿಸಿದ್ದರು. ಅವರು ಹಗಲು- ರಾತ್ರಿ ಪಾಳಿಗಳಲ್ಲಿ ಶೈಲಜಾ ಅವರ ಆರೈಕೆ ಮಾಡುತ್ತಿದ್ದರು’ ಎಂದು ಪೊಲೀಸರು ತಿಳಿಸಿದರು.
‘ಶುಕ್ರವಾರ ರಾತ್ರಿ ಪಾಳಿಯಲ್ಲಿ ಶೈಲಜಾ ಅವರನ್ನು ನೋಡಿಕೊಂಡಿದ್ದ ಶುಶ್ರೂಷಕಿ ಶನಿವಾರ ಬೆಳಿಗ್ಗೆ 6.30ಕ್ಕೆ ತೆರಳಿದ್ದರು. ಇನ್ನೊಬ್ಬ ಶುಶ್ರೂಷಕಿ ಬೆಳಿಗ್ಗೆ 8.30ಕ್ಕೆ ಬಂದಿದ್ದರು. ಅವರು ದಿನೇಶ್ ರಾವ್‌ಗೆ ಕರೆ ಮಾಡಿದರೂ ಅವರು ಸ್ವೀಕರಿಸಿರಲಿಲ್ಲ. ಮನೆಯ ಬೆಲ್ ಒತ್ತಿದರೂ ಒಳಗಿನಿಂದ ಸ್ಪಂದನೆ ಬಂದಿರಲಿಲ್ಲ. ಬಳಿಕ ಅಕ್ಕಪಕ್ಕದವರನ್ನು ಹಾಗೂ ಪರಿಚಯದವರನ್ನು ಕರೆಸಿ ಬಾಗಿಲು ತೆರೆಯಿಸಿ ನೋಡಿದಾಗ ಶೈಲಜಾ ಅವರು ಹಾಸಿಗೆಯಲ್ಲೇ ಮೃತಪಟ್ಟಿದ್ದು ಕಂಡುಬಂದಿತ್ತು. ಪಕ್ಕದ ಕೊಠಡಿಯಲ್ಲಿ ನೇಣು ಬಿಗಿದುಕೊಂಡ ಸ್ಥಿತಿಯಲ್ಲಿ ದಿನೇಶ್ ಅವರ ಮೃತದೇಹ ಪತ್ತೆಯಾಗಿದೆ’ ಎಂದು ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ತಿಳಿಸಿದ್ದಾರೆ.
‘ವಿಧಿವಿಜ್ಞಾನ ತಜ್ಞರು ನೀಡಿರುವ ಪ್ರಾಥಮಿಕ ಮಾಹಿತಿ ಪ್ರಕಾರ, ದಿನೇಶ್ ರಾವ್ ಅವರು ಪತ್ನಿಯನ್ನು ದಿಂಬಿನಿಂದ ಸಾಯಿಸಿ ತಾವೂ ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ’ ಎಂದು ಕಮಿಷನರ್ ತಿಳಿಸಿದರು.
‘ದಿನೇಶ್ ರಾವ್ ಅವರ ಸ್ನೇಹಿತರಿಂದಲೂ ಮಾಹಿತಿ ಕಲೆ ಹಾಕಿದ್ದೇವೆ. ಸ್ನೇಹಿತರು ಹೇಳುವ ಪ್ರಕಾರ, ದಿನೇಶ್ ತಮ್ಮ ಪತ್ನಿಯನ್ನು ಅತೀವವಾಗಿ ಪ್ರೀತಿಸುತ್ತಿದ್ದರು. ಆರೇಳು ವರ್ಷಗಳಿಂದ ಪತ್ನಿ ಹಾಸಿಗೆ ಬಿಟ್ಟು ಏಳಲಾಗದೇ ನರಳುವುದನ್ನು ನೋಡಿ ಬೇಸರಗೊಂಡಿದ್ದರು. ತಾವೂ ಖಿನ್ನತೆಗೆ ಒಳಗಾಗಿದ್ದರು. ನೀನು ಸತ್ತರೆ, ನಾನೂ ನಿನ್ನ ಜೊತೆ ಸಾಯುತ್ತೇನೆ ಎಂದೂ ಹೇಳುತ್ತಿದ್ದರು’ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ದಿನೇಶ್ ಅವರ ಸಹೋದರ ಉರ್ವ ಠಾಣೆಗೆ ದೂರು ನೀಡಿದ್ದಾರೆ