ಸಮಗ್ರ ನ್ಯೂಸ್: ಮೂಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳ್ಳಾಯರು, ತೋಕೂರು, ಕೆರೆಕಾಡು ಪರಿಸರದ ಮುಖ್ಯ ರಸ್ತೆಗಳಲ್ಲಿ ಅಮಾವಾಸ್ಯೆ, ಹುಣ್ಣಿಮೆಯಂದು ವಾಮಾಚಾರ ಪ್ರಯೋಗ ನಡೆಸಲಾಗುತ್ತಿದ್ದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತೋಕೂರು ಬಸ್ ನಿಲ್ದಾಣ ಬಳಿಯ ಕೂಡು ರಸ್ತೆ, ಟಿ ಎ ಬೋರ್ಡ್ ಬಳಿಯ ರಸ್ತೆ, ಬೆಳ್ಳಾಯರು ಮುಖ್ಯರಸ್ತೆಗಳಲ್ಲಿ ಮಧ್ಯರಾತ್ರಿಯ ವೇಳೆ ಬೈಕ್, ಸ್ಕೂಟರ್, ಕಾರ್, ರಿಕ್ಷಾಗಳು ಸಂಶಯಾಸ್ಪದವಾಗಿ ಸಂಚಾರ ನಡೆಸುತ್ತಿದ್ದು ಶನಿವಾರ ಬೆಳ್ಳಾಯರು ಟಿಎ ಬೋರ್ಡ್ ಪ್ಲೈವುಡ್ ಫ್ಯಾಕ್ಟರಿ ಬಳಿ ಇದೇ ರೀತಿ ಮಂತ್ರಿಸಿದ ನಿಂಬೆಹಣ್ಣು, ತೆಂಗಿನಕಾಯಿ ಒಡೆದು ವಾಮಾಚಾರ ಪ್ರಯೋಗ ನಡೆದಿದೆ. ರಾತ್ರಿ ವೇಳೆ ಬೈಕೊಂದು ಸಂಚರಿಸಿದ್ದು ಅದರ ನಂಬರ್ ಗುರುತಿಸಿ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಜನಸಂಚಾರ ವಿರಳವಾದ ರಸ್ತೆಗಳನ್ನು ವಾಮಾಚಾರಿಗಳು ಬಳಸಿಕೊಳ್ಳುತ್ತಿದ್ದು ಇದರಿಂದ ಗ್ರಾಮಸ್ಥರು ಆತಂಕಕ್ಕೆ ಒಳಗಾಗಿದ್ದಾರೆ. ಮೂಲ್ಕಿ ಠಾಣಾ ಪೊಲೀಸರು ಅಮಾವಾಸ್ಯೆ, ಹುಣ್ಣಿಮೆ ದಿನಗಳಲ್ಲಿ ಇಲ್ಲಿ ಗಸ್ತು ಬಿಗಿಗೊಳಿಸಬೇಕಾಗಿ ಸ್ಥಳೀಯರು ಆಗ್ರಹಿಸಿದ್ದಾರೆ.