ಸಮಗ್ರ ನ್ಯೂಸ್: ಬಿಜೆಪಿ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಅಧಿಕಾರಿಗಳು ಬೆಂಗಳೂರಿನ ಎನ್‌ಐಎ ವಿಶೇಷ ನ್ಯಾಯಾಲಯಕ್ಕೆ ಶುಕ್ರವಾರ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದಾರೆ.
1,500 ಪುಟಗಳ ಚಾರ್ಜ್‌ಶೀಟ್‌ನಲ್ಲಿ 240 ಸಾಕ್ಷಿಗಳ ಹೇಳಿಕೆಗಳು ಒಳಗೊಂಡಿದ್ದು, ಒಟ್ಟು 20 ಆರೋಪಿಗಳನ್ನು ಉಲ್ಲೇಖೀಸಲಾಗಿದೆ ಎನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ 14 ಆರೋಪಿಗಳನ್ನು ಬಂಧಿಸಲಾಗಿದ್ದು, 6 ಮಂದಿಗಾಗಿ ಹುಡುಕಾಟ ನಡೆದಿದೆ. ಎನ್‌ಐಎ ಪರ ವಕೀಲರಾದ ಪಿ. ಪ್ರಸನ್ನ ಕುಮಾರ್ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ.
ಈ ನಡುವೆ ಪ್ರಕರಣದ ಆರೋಪಿಗಳಾಗಿ ತಲೆಮರೆಸಿಕೊಂಡಿರುವ ಬಂಟ್ವಾಳ ತಾಲೂಕಿನ ಕೊಡಾಜೆಯ ಮೊಹಮ್ಮದ್ ಷರೀಫ್, ನೆಕ್ಕಿಲಾಡಿಯ ಅಗ್ನಾಡಿ ಹೌಸ್‌ನ ಮಸೂದ್ ಕೆ.ಎ. ಅವರ ಸುಳಿವು ನೀಡಿದವರಿಗೆ ಎನ್‌ಐಎ ತಲಾ 10 ಲಕ್ಷ ರೂ. ಬಹುಮಾನ ಘೋಷಿಸಿದೆ. ಪ್ರವೀಣ್ ನೆಟ್ಟಾರು ಅವರನ್ನು 2022ರ ಜು. 26 ರಂದು ಬೆಳ್ಳಾರೆಯಲ್ಲಿರುವ ಅವರ ಕೋಳಿ ಅಂಗಡಿ ಬಳಿ ಹತ್ಯೆ ಮಾಡಲಾಗಿತ್ತು.