Ad Widget .

ಸೋಲಿಲ್ಲದ ಸರದಾರ, ಸಚಿವ ಎಸ್.ಅಂಗಾರ ರಾಜಕೀಯಕ್ಕೆ ಹೇಳ್ತಾರಾ ಗುಡ್ ಬೈ? ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಹೊಸಬರಿಗೆ ಬಿಜೆಪಿ ಮಣೆ?

ಸಮಗ್ರ ನ್ಯೂಸ್: ರಾಜ್ಯದ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಭದ್ರಕೋಟೆ ಎನಿಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದಲ್ಲಿ ಹೊಸ ರಾಜಕೀಯ ಸಂಚಲನ ಉಂಟಾಗಿದೆ. ಸೋಲನ್ನೇ ಅರಿಯದ, ಆರು ಬಾರಿ ಶಾಸಕರಾಗಿ, ಎರಡು ಬಾರಿ ಸಚಿವರಾಗಿರುವ ಎಸ್.ಅಂಗಾರ ರಾಜಕೀಯ ನಿವೃತ್ತಿ ಪಡೆಯಲಿದ್ದಾರೆ ಎಂಬ ಸುದ್ದಿಯೊಂದು ಗುಲ್ಲೆಬ್ಬಿಸಿದೆ.

Ad Widget . Ad Widget .

ರಾಜ್ಯ ವಿಧಾನ ಸಭಾ ಚುನಾವಣೆ ನಡೆಯಲಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ತಯಾರಿ ಮಾಡಿಕೊಂಡಿದೆ. ಪ್ರತಿಯೊಂದು ಕ್ಷೇತ್ರದಲ್ಲೂ, ಪತ್ರೀ ಪಕ್ಷಕ್ಕೂ ಅಭ್ಯರ್ಥಿಗಳ ಆಯ್ಕೆ ಮತ್ತು ಗೆಲುವು ಕೂಡ ಬಹಳ ಮುಖ್ಯ. ಇದೀಗ ರಾಜಕೀಯ ವಲಯದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಗ್ಗೆ ಚರ್ಚೆ ನಡೆಯುತ್ತಿದೆ. ಒಟ್ಟು ಎಂಟು ವಿಧಾನಸಭಾ ಸ್ಥಾನಗಳಿರುವ ಈ ಜಿಲ್ಲೆ ಕೇಸರಿ ಕೋಟೆ. ರಾಜ್ಯದ ಜನರ ಚಿತ್ತವೆಲ್ಲ ಕರಾವಳಿ ಜಿಲ್ಲೆಯ ಮೇಲೆಯೇ ಇದೆ.

Ad Widget . Ad Widget .

ಚುನಾವಣೆಗೆ ಕ್ಷಣಗಣನೆ ಆರಂಭವಾಗುತ್ತಿದ್ದಂತೆಯೇ ಸುಳ್ಯ ವಿಧಾನಸಭಾ ಕ್ಷೇತ್ರದ ಮೇಲೆ ಕಣ್ಣಿಟ್ಟಿರುವುದಂತು ಸುಳ್ಳಲ್ಲ. ಬಿಜೆಪಿಯ ಭದ್ರಕೋಟೆ, ಬಹುಜನ ಸಮಾಜವೇ ಹೆಚ್ಚಿರುವ ಸುಳ್ಯ ಮೊದಲ ವಿಧಾನಸಭಾ ಚುನಾವಣೆಯಿಂದಲೂ ರಾಜ್ಯದ ಏಕೈಕ ದಲಿತ ಮೀಸಲು ಕ್ಷೇತ್ರ. ವಿಧಾನಸಭಾ ಕ್ಷೇತ್ರಗಳ ಪುನರ್ ವಿಂಗಡಣೆ ಹಲವು ಬಾರಿಯಾದರೂ ಸುಳ್ಯದ ಮೀಸಲಾತಿ ಮಾತ್ರ ಬದಲಾಗಿಲ್ಲ. 1972ರಿಂದ ಇಲ್ಲಿ ಪರಿಶಿಷ್ಟ ಜಾತಿಯವರಿಗೆ ಮಾತ್ರ ಸ್ಪರ್ಧೆಗೆ ಅವಕಾಶ ಇದೆ. 1994ರಿಂದ ಸುಳ್ಯ ಕ್ಷೇತ್ರವನ್ನು ಆಳುತ್ತಿರುವ ಬಿಜೆಪಿ ಪಕ್ಷಕ್ಕೆ ಎಸ್‌ ಅಂಗಾರ ಒಬ್ಬರೇ ನಾಯಕ. 1994, 1999, 2004, 2008, 2013, 2018 ಹೀಗೆ ಸತತ 6 ಚುನಾವಣೆಗಳಲ್ಲಿ ಬಿಜೆಪಿಯ ಸಚಿವ ಅಂಗಾರ ಭರ್ಜರಿ ಗೆಲುವು ಸಾಧಿಸಿದ್ದಾರೆ. ಇನ್ನು 2013ರಲ್ಲಿ ದಕ್ಷಿಣ ಕನ್ನಡದ ಎಲ್ಲಾ ಕ್ಷೇತ್ರಗಳಲ್ಲಿ ಬಿಜೆಪಿ ಸೋತಾಗ ಗೆದ್ದ ಏಕೈಕ ವ್ಯಕ್ತಿ ಎಂದರೆ ಅದು ಅಂಗಾರ. ಜಿಲ್ಲೆಯಲ್ಲಿ ಬಿಜೆಪಿಯ ಮಾನ ಉಳಿಸಿದ್ದು ಕೂಡ ಇವರೇ. ಅದಕ್ಕೆ ಅಂಗಾರ ಯಾವತ್ತೂ ಸುಳ್ಯದ ಬಂಗಾರ ಎಂಬ ಮಾತಿದೆ.

ತನ್ನ ಸುದೀರ್ಘ ರಾಜಕೀಯ ಜೀವನಕ್ಕೆ ನಿವೃತ್ತಿ ಘೋಷಿಸಿ ವಿಶ್ರಾಂತ ಜೀವನ ನಡೆಸಲಿದ್ದಾರಂತೆ. ಸತತ ಆರು ಬಾರಿ ಸುಳ್ಯ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದರೂ ಕೂಡ ಗೆಲುವಿನ ಅಂತರ ಕಡಿಮೆಯಾಗುತ್ತಾ ಹೋಗುತ್ತಿದೆ. ಜೊತೆಗೆ ಜನಸಾಮಾನ್ಯ ಮಾತ್ರವಲ್ಲ ಸಂಘ ಪರಿವಾರ ಮತ್ತು ಬಿಜೆಪಿ ಪಾಳಯದಲ್ಲಿ ಕೂಡ ಈ ಬಾರಿ ಅಂಗಾರರನ್ನು ಬಿಟ್ಟು ಹೊಸ ಅಭ್ಯರ್ಥಿಯನ್ನು ಇಳಿಸುವ ಸಾಧ್ಯತೆ ಬಗ್ಗೆ ವರಿಷ್ಠರು ಚರ್ಚೆ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಹೇಳಿ ಕೇಳಿ ಅಂಗಾರ ಸೌಮ್ಯ ಸ್ವಭಾವದ ವ್ಯಕ್ತಿ. ಯಾವುದೇ ಪದವಿ, ಮಂತ್ರಿ ಸ್ಥಾನಕ್ಕೆ ಆಸೆ ಪಟ್ಟವರಲ್ಲ. ಮಂತ್ರಿ ಸ್ಥಾನ ಕೂಡ ಕೇಳಿ ಪಡೆದದ್ದಲ್ಲ. ಏನೇ ನಿರ್ಧಾರವಿದ್ದರು ಅದು ಪಕ್ಷದ ತೀರ್ಮಾನ ಅದಕ್ಕೆ ನಾನು ಯಾವತ್ತೂ ತಲೆ ಬಾಗುವೆ ಎಂದು ಮೊದಲಿನಿಂದಲೂ ಹೇಳಿಕೊಂಡ ನಿಷ್ಠಾವಂತ ಕಾರ್ಯಕರ್ತ.

ಇದೀಗ ಅಂಗಾರರು ರಾಜಕೀಯ ನಿವೃತ್ತಿ‌ ಪಡೆಯುತ್ತಾರೆ ಎಂಬ ಸುದ್ದಿ ಹರಡುತ್ತಿದ್ದಂತೆ ಬಿಜೆಪಿ ಪಕ್ಷದಿಂದ ಕಣಕ್ಕಿಳಿಯಲು ಸಾಲು ಸಾಲು ಹೆಸರುಗಳು ಕೇಳಿಬರುತ್ತಿವೆ. ಈ ಬಾರಿ ಬಿಜೆಪಿಯಿಂದ ಉತ್ತಮ ವಿದ್ಯಾವಂತ ಯುವ ಪೀಳಿಗೆಯನ್ನು ಕಣಕ್ಕಿಳಿಸಲು ಬಿಜೆಪಿ ಮತ್ತು ಸಂಘಪರಿವಾರ ಕೆಲ ಹೆಸರುಗಳನ್ನು ಸೂಚಿಸಿದೆ ಎನ್ನಲಾಗಿದೆ. ಅದರಲ್ಲಿ ಮೊದಲು ಕೇಳಿಬರುತ್ತಿರುವ ಹೆಸರು ಶಿವಪ್ರಸಾದ್ ಪೆರುವಾಜೆ. ಸಂಘಪರಿವಾರದಿಂದ ಮುಂದೆ ಬಂದ 31 ವರ್ಷದ ಶಿವಪ್ರಸಾದ್ ಪೆರುವಾಜೆ ಕಳೆದ 6 ವರ್ಷಗಳಿಂದಲೂ ಹೆಚ್ಚು ಸಂಘದ ಜವಾಬ್ದಾರಿ ನಿರ್ವಹಿಸಿ ತಾಲೂಕಿನ ಕಾರ್ಯಕರ್ತರಿಗೆ ಚಿರಪರಿಚಿತ ಯುವಕ‌. ಸಂಘ ಹೇಳಿದ ಕೆಲಸವನ್ನು ನಿಷ್ಠೆಯಿಂದ ಮಾಡುವ ಪಾದರಸದಂತಹ ವ್ಯಕ್ತಿತ್ವದ ಶಿವಪ್ರಸಾದ್ ಸಮಾಜದ ಎಲ್ಲಾ ವರ್ಗದವರನ್ನು ಸಮಾನವಾಗಿ ಕಾಣುತ್ತ ಎಲ್ಲಾ ಬಣಗಳೊಂದಿಗೆ ಅನ್ಯೋನ್ಯತೆ ಕಾಯ್ದುಕೊಂಡವರು. ಅಭ್ಯರ್ಥಿಗಳ ನಡುವಿನ ತಿಕ್ಕಾಟ ತಾರಕಕ್ಕೇರಿದರೇ ಇದೇ ಹೆಸರು ಬಹುತೇಕ ಅಂತಿಮ. ಕಾಲೇಜು ನಾಯಕತ್ವ ನಿಭಾಯಿಸಿರುವ ಅನುಭವ ಇರುವ ಈತ M.com ಪದವೀಧರನಾಗಿದ್ದಾರೆ. ಬಿಜೆಪಿ ಮತ್ತು ಸಂಘಪರಿವಾರದ ಉನ್ನತ ಮಟ್ಟದಲ್ಲಿ ಕೂಡ ಶಿವಪ್ರಸಾದ್ ಹೆಸರು ಮುಂಚೂಣಿಯಲ್ಲಿದೆ ಎಂದು ಹೇಳಲಾಗಿದೆ.

ಎಬಿವಿಪಿ ಹಿನ್ನೆಲೆಯ 27 ವರ್ಷದ ಪದ್ಮಕುಮಾರ್ ಗುಂಡಡ್ಕ ಸಂಘದೊಂದಿಗೂ ನಿಕಟ ಸಂಪರ್ಕ ಹೊಂದಿದವರು. ಪ್ರಸ್ತುತ ರಾಜಕೀಯ ಶಾಸ್ತ್ರದ ಉಪನ್ಯಾಸಕರಾಗಿರುವ ಪದ್ಮಕುಮಾರ್ ಉತ್ತಮ ವಾಗ್ಮಿಗಳು ಕೂಡ ಹೌದು. ಇವರ ಪರವಾಗಿ ಪ್ರಬಲ ಬ್ಯಾಟಿಂಗ್ ಮಾಡುವ ತಂಡವು ಈಗಲೇ ಕಾರ್ಯಪ್ರವೃತ್ತವಾಗಿದೆ. ವಯಸ್ಸಿನ ಕಾರಣವೊಂದು ಅಡ್ಡಿಯಾಗದಿದ್ದರೇ ಇವರು ಅಭ್ಯರ್ಥಿಯಾಗಿ ಮುನ್ನೆಲೆಗೆ ಬರಬಹುದು.

ಮಿಕ್ಕಂತೆ ಬಿಜೆಪಿಯಲ್ಲಿ ಸಾಲು ಸಾಲು ಹೆಸರುಗಳಿವೆ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ಭಾಗೀರಥಿ ಮುರುಳ್ಯ, ತಾಲೂಕು ಪಂಚಾಯತ್ ಮಾಜಿ‌ ಅಧ್ಯಕ್ಷರಾದ ಚನಿಯ ಕಲ್ತಡ್ಕ, ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಮಡಿಕೇರಿ ಸಂಘಪರಿವಾರದ ಪಿಎಂ ರವಿ, ಶಂಕರ್ ಪೆರಾಜೆ, ಶೀನಪ್ಪ ಬಯಂಬು, ವಕೀಲ ಜಗದೀಶ್, ಸಂಜಯಕುಮಾರ್ ಪೈಚಾರು, ಭಜರಂಗದಳ ಲತೀಶ್ ಗುಂಡ್ಯ ಹೀಗೆ ಇವರೆಲ್ಲ ಸ್ಥಳೀಯ ನಾಯಕರಾಗಿದ್ದಾರೆ.

ಒಟ್ಟಾರೆ ಎಸ್.ಅಂಗಾರರು ರಾಜಕೀಯಕ್ಕೆ ವಿದಾಯ ಹೇಳಿ ಹೊಸ ಮುಖಗಳು ಕಣಕ್ಕಿಳಿದರೆ ಸುಳ್ಯ ಬಿಜೆಪಿಯನ್ನು ಹಿಡಿಯೋರಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ. ಜೊತೆಗೆ ಶಾಸಕರಾಗಿ, ಸಚಿವರಾಗಿದ್ದರೂ ಅಂಗಾರರು ತಮ್ಮ ಕ್ಷೇತ್ರದಲ್ಲಿ ಹೇಳಿಕೊಳ್ಳುವಂತಹ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ ಎಂಬುದೂ ಬಿಜೆಪಿ ವಲಯದಲ್ಲೇ ಕೇಳಿಬರುತ್ತಿದೆ. ಇದಕ್ಕೆ ಇತ್ತೀಚೆಗೆ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆಯೊಂದು ಎದ್ದಿರುವುದು ಸ್ವತಃ ಅಂಗಾರರಿಗೆ ತಿಳಿದಿರದ ಸಂಗತಿಯೇನಲ್ಲ. ಇದೇ ಕಾರಣದಿಂದ ಅಂಗಾರರು ರಾಜಕೀಯ ನಿವೃತ್ತಿಯತ್ತ ಮುಖ ಮಾಡಿರಬಹುದು ಎಂಬುದು ರಾಜಕೀಯ ನಾಯಕರ ಅಂಬೋಣ. ಈ ಎಲ್ಲಾ ಅನುಮಾನಗಳಿಗೆ ಎಸ್.ಅಂಗಾರರೇ ಉತ್ತರಿಸಬೇಕಿದೆ.

Leave a Comment

Your email address will not be published. Required fields are marked *