ಮಂಗಳೂರು: ಅಗತ್ಯವಸ್ತುಗಳ ಬೆಲೆ ಏರಿಕೆಯೇ ಬಿಜೆಪಿ ಸರಕಾರದ ಬಹುದೊಡ್ಡ ಸಾಧನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಹೇಳಿದೆ. ನಿನ್ನೆ ಮಂಗಳೂರಿನಲ್ಲಿ ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ತೈಲ ಬೆಲೆ ಏರಿಕೆ ಖಂಡಿಸಿ ಪ್ರತಿಭಟನೆ ನಡೆಯಿತು.
ಕಾಂಗ್ರೆಸ್ ಕಚೇರಿ ಎದುರು ನಡೆದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಹರೀಶ್ ಕುಮಾರ್, ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ನೋಟ್ ಬ್ಯಾನ್, ಜಿಎಸ್‌ಟಿಯಂತಹ ಕಾನೂನು ಜಾರಿಗೆ ತಂದು ಜನರನ್ನು ಸಂಕಷ್ಟಕ್ಕೆ ದೂಡಿದೆ. ಇದುವರೆಗೆ ಸರ್ಕಾರ ಅಭಿವೃದ್ಧಿಪರ, ಜನಪರ ಕಾರ್ಯಗಳನ್ನು ಅನುಷ್ಠಾನಕ್ಕೆ ತಂದಿಲ್ಲ. ಯುಪಿಎ ಸರ್ಕಾರ ಇದ್ದಾಗ ಪೆಟ್ರೋಲ್-ಡೀಸೆಲ್ ದರ ₹70 ಇದ್ದು, ಆಗ ವಿದೇಶದಲ್ಲಿ ಕಚ್ಚಾತೈಲ ದರ 145 ಡಾಲರ್ ಇತ್ತು. ಈಗ ಕಚ್ಚಾತೈಲ ದರ 45 ಡಾಲರ್ ಇದ್ದರೂ, ಪೆಟ್ರೋಲ್ ಬೆಲೆ ₹100 ದಾಟಿದೆ. ಬೆಲೆ ಏರಿಕೆಯೇ ಇವರ ಬಹುದೊಡ್ಡ ಸಾಧನೆ ಎಂದು ಬಿಜೆಪಿ ಸರ್ಕಾರದ ಮೇಲೆ ಹರಿಹಾಯ್ದರು.
ಮೋದಿ ನೇತೃತ್ವದ ಸರ್ಕಾರ ಪದೇ ಪದೇ ಡೀಸೆಲ್, ಪೆಟ್ರೋಲ್ ಜತೆಗೆ ಅಡುಗೆ ಅನಿಲ ಬೆಲೆ ಏರಿಕೆ ಮಾಡುವ ಮೂಲಕ ಕೋವಿಡ್–19 ಸಂಕಷ್ಟದಲ್ಲಿರುವ ಜನತೆಗೆ ಮತ್ತಷ್ಟು ತೊಂದರೆ ಕೊಡುತ್ತಿದೆ ಎಂದು ಇಬ್ರಾಹಿಂ ಕೋಡಿಜಾಲ್ ಆರೋಪಿಸಿದರು.
ಶಾಹುಲ್ ಹಮೀದ್ ಮಾತನಾಡಿ, ಆತ್ಮನಿರ್ಭರತೆಯ ವಿಶ್ವಾಸ ನೀಡಿದ ಕೇಂದ್ರ ಸರ್ಕಾರ ಜನರ ಆತ್ಮಹತ್ಯೆಗೆ ಪ್ರಚೋದನೆ ನೀಡುತ್ತಿದೆ. ಒಂದು ತಿಂಗಳಲ್ಲಿ 18 ಬಾರಿ ತೈಲ ಬೆಲೆ ಏರಿಕೆ ಮಾಡಲಾಗಿದೆ. ₹30ಕ್ಕೆ ಸಿಗಬೇಕಿದ್ದ ಪೆಟ್ರೋಲ್ ಬೆಲೆ ₹100 ದಾಟಿದೆ. ಜನರ ಶಾಪ ಸರ್ಕಾರಕ್ಕೆ ತಟ್ಟದೇ ಇರದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಜಿಲ್ಲಾ ಘಟಕದ ಪದಾಧಿಕಾರಿಗಳು ಕಾರ್ಯಕರ್ತರು ಭಾಗವಹಿಸಿದ್ದರು.