ಸಮಗ್ರ ನ್ಯೂಸ್: ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದು, ಪ್ರತಿಷ್ಟೆಯ ಪ್ರಶ್ನೆಯಾಗಿದ್ದ, ಸಾರ್ವಜನಿಕರ ಬಹುಬೇಡಿಕೆಯ ದ.ಕ ಜಿಲ್ಲೆಯ ಸುಳ್ಯ ತಾಲೂಕಿನ ಅರಂತೋಡು – ಅಡ್ತಲೆ – ಎಲಿಮಲೆ ರಸ್ತೆ ಅಭಿವೃದ್ಧಿ ಕಾಮಗಾರಿ ಆರಂಭಗೊಂಡಿದೆ.
ಈ ರಸ್ತೆ ಅಭಿವೃದ್ಧಿಗಾಗಿ ಹಲವು ವರ್ಷಗಳಿಂದ ಈ ಭಾಗದ ಸಾರ್ವಜನಿಕರು ಬೇಡಿಕೆ ಮುಂದಿಟ್ಟಿದ್ದರು. ಅರಂತೋಡು ನಾಗರಿಕ ಹಿತರಕ್ಷಣಾ ವೇದಿಕೆಯವರು ಹಲವು ಬಾರಿ ಶಾಸಕರಾದಿಯಾಗಿ ಜನಪ್ರತಿನಿಧಿಗಳಿಗೆ, ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಅಲ್ಲದೆ ಕಳೆದ ಬಾರಿ ಮತದಾನ ಬಹಿಷ್ಕಾರದ ಬ್ಯಾನರ್ ದಾರಿಯುದ್ದಕ್ಕೂ ಅಳವಡಿಸಲಾಗಿತ್ತು.
ಇತ್ತೀಚೆಗೆ ಈ ರಸ್ತೆಯ ಅಭಿವೃದ್ಧಿ ಗಾಗಿ ಸಚಿವ ಎಸ್.ಅಂಗಾರರು ಮೂರು ಕೋಟಿ ರೂ ಅನುದಾನ ಇರಿಸಿದ್ದು ವಾರದ ಹಿಂದೆ ಗುದ್ದಲಿಪೂಜೆ ನೆರವೇರಿಸಿದರು. ಗುದ್ದಲಿಪೂಜೆ ದಿನ ಸಚಿವ ಎಸ್.ಅಂಗಾರರು ವಾರದೊಳಗೆ ಕಾಮಗಾರಿ ಆರಂಭಿಸುವ ಭರವಸೆ ನೀಡಿದರು. ಆದರೆ ಕಾಮಗಾರಿ ಆರಂಭವಾಗದಿದ್ದರೆ ಪ್ರತಿಭಟನೆ ನಡೆಸುವುದಾಗಿ ನಾಗರಿಕ ಹಿತರಕ್ಷಣಾ ವೇದಿಕೆ ಹೇಳಿತ್ತು. ಇದೀಗ ಗುದ್ದಲಿಪೂಜೆ ನಡೆದು ವಾರದೊಳಗೆ ಆ ರಸ್ತೆಯ ಕಾಮಗಾರಿ ಆರಂಭಗೊಂಡಿದ್ದು, ಸಾರ್ವಜನಿಕರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.
ಈ ನಡುವೆ ರಸ್ತೆ ಅಭಿವೃದ್ಧಿಗೆ, ಅನುದಾನಕ್ಕಾಗಿ ಶ್ರಮ ವಹಿಸಿದ, ಗ್ರಾಮ ಪಂಚಾಯತ್ ಸದಸ್ಯ ಕೇಶವ ಅಡ್ತಲೆ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಹರೀಶ್ ಕಂಜಿಪಿಲಿ, ಸಚಿವ ಎಸ್ ಅಂಗಾರ ರವರಿಗೆ ನಾಗರಿಕ ಹಿತರಕ್ಷಣಾ ವೇದಿಕೆ ಅಡ್ತಲೆ ವತಿಯಿಂದ ಅಭಿನಂದನೆ ಸಲ್ಲಿಸಿದೆ.