ಸಮಗ್ರ ನ್ಯೂಸ್: ಯೋಗಾಥಾನ್‍ದಲ್ಲಿ ಗಿನ್ನೆಸ್ ದಾಖಲೆ ಸ್ಥಾಪಿಸುವ ಕರ್ನಾಟಕ ರಾಜ್ಯದ ಕನಸು ಕೊನೆಗೂ ಈಡೇರಿದೆ. ಯೋಗಾಸನದ ವಿಶೇಷ ಪ್ರದರ್ಶನ ಆಯೋಜಿಸಲು ಕಳೆದ ಎಂಟು ತಿಂಗಳಿಂದ ರಾಜ್ಯ ಯುವ ಜನ ಸೇವಾ ಹಾಗೂ ಕ್ರೀಡಾ ಇಲಾಖೆಯು ನಿರಂತರವಾಗಿ ಶ್ರಮಿಸಿತ್ತು. ಭಾನುವಾರ (ಜ.15) ರಾಜ್ಯದಲ್ಲಿ ಏಕಕಾಲದಲ್ಲಿ ನಡೆದ ಯೋಗಾಥಾನ್ನಲ್ಲಿ 4,05,255 ಜನರು ಭಾಗಿಯಾಗುವ ಮೂಲಕ ಕರ್ನಾಟಕ ರಾಜ್ಯದ ಹೆಸರಿನಲ್ಲಿ ಗಿನ್ನೆಸ್ ದಾಖಲೆ ಮಾಡಲಾಗಿದೆ ಎಂದು ರೇಷ್ಮೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಚಿವ ಡಾ.ಕೆ.ಸಿ.ನಾರಾಯಣಗೌಡ ಅವರು ತಿಳಿಸಿದ್ದಾರೆ.
ಯೋಗಾಥಾನ್ ಕುರಿತು ಭಾನುವಾರ ಧಾರವಾಡದಲ್ಲಿ ಪತ್ರಿಕಾ ಪ್ರಕಟಣೆ ನೀಡಿರುವ ಸಚಿವರು, ಧಾರವಾಡದಲ್ಲಿ ಆಯೋಜನೆಯಾಗಿರುವ 26ನೇ ರಾಷ್ಟ್ರೀಯ ಯುವಜನೋತ್ಸವದ ಅಂಗವಾಗಿ ರಾಜ್ಯದಾದ್ಯಂತ ಯೋಗಾಥಾನ ಸಂಘಟಿಸಲಾಗಿತ್ತು. ಯೋಗಾಥಾನದಲ್ಲಿ ಭಾಗವಹಿಸಲು ರಾಜ್ಯದ ಸುಮಾರು 14 ಲಕ್ಷ ಯೋಗಪಟುಗಳು, ಯೋಗಾಸಕ್ತರು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದರು.
ಭಾನುವಾರ ಜರುಗಿದ ಯೋಗಾಥಾನ್ ದಲ್ಲಿ ಏಕಕಾಲಕ್ಕೆ ರಾಜ್ಯದ 4,05,255 ಜನ ಭಾಗವಹಿಸಿ ಯೋಗಾಥಾನ್ ದಲ್ಲಿ ಗಿನ್ನೆಸ್ ದಾಖಲೆ ಮಾಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ರಾಜ್ಯದ ವಿವಿಧ ಜಿಲ್ಲೆಗಳ 33 ಸ್ಥಳಗಳಲ್ಲಿ ಏಕಕಾಲಕ್ಕೆ 4,05,255 ಜನ ಯೋಗಾಸನ ಮಾಡಿದ್ದಾರೆ. 2018ರಲ್ಲಿ ರಾಜಸ್ಥಾನದ ವಿವಿಧ ಸ್ಥಳಗಳಲ್ಲಿ ಏಕಕಾಲಕ್ಕೆ 1,00,984 ಜನ ಯೋಗ ಮಾಡುವ ಮೂಲಕ ಗಿನ್ನೆಸ್ ದಾಖಲೆ ಮಾಡಿದ್ದರು. ಇದಕ್ಕೂ ಮೊದಲು 2017ರಲ್ಲಿ ಮೈಸೂರು ನಗರದಲ್ಲಿ ಏಕಕಾಲಕ್ಕೆ 55,524 ಜನ ಯೋಗ ಪ್ರದರ್ಶನ ಮಾಡುವ ಮೂಲಕ ಗಿನ್ನೆಸ್ ದಾಖಲೆ ಬರೆಯಲಾಗಿತ್ತು.