ಸಮಗ್ರ ನ್ಯೂಸ್: ಸ್ಯಾಂಟ್ರೋ ರವಿಯ ಸ್ವೀಟ್ ಬ್ರದರ್ ಆಗಿರುವ ಸಿಎಂ ಪುತ್ರ ಮತ್ತು ರವಿಯ ವಾಟ್ಸಾಪ್ ಮೆಸೇಜ್‌ಗಳ ಸ್ಕ್ರೀನ್ ಶಾಟ್ ಅನ್ನು ಕಾಂಗ್ರೆಸ್ ರಿಲೀಸ್ ಮಾಡಿದ್ದು, ಇವು ಹಲವು ಪ್ರಶ್ನೆಗಳನ್ನ ಎತ್ತುತ್ತವೆ. ಎಲ್ಲಾ ಬ್ರೋಕರ್‌ಗಳನ್ನು ಮ್ಯಾನೇಜ್ ಮಾಡುವ ಜವಾಬ್ದಾರಿ ಸಿಎಂ ಪುತ್ರನದ್ದೇ? ಎಂಬ ಅನುಮಾನ ಮೂಡಿದ್ದು, ಸಿಎಂ ಬೊಮ್ಮಾಯಿ ಈ ಆರೋಪಕ್ಕೆ ಉತ್ತರಿಸಬೇಕಿದೆ.
ಸಿಎಂ ಪಾಲಿನ ಕಮಿಷನ್ ವ್ಯವಹಾರ ನೋಡಿಕೊಳ್ಳುವುದು ಪುತ್ರನೇ? ಸ್ವತಃ ಸಿಎಂ ರವಿಯ ರಕ್ಷಣೆಗೆ ನಿಂತಿದ್ದಾರೆಯೇ ಬಿಜೆಪಿ ಎಂಬುದಾಗಿ ಕರ್ನಾಟಕ ಕಾಂಗ್ರೆಸ್ ಟ್ವಿಟ್ ನಲ್ಲಿ ವಾಟ್ಸಾಪ್ ಚಾಟ್ ಬಿಡುಗಡೆ ಮಾಡಿ, ಪ್ರಕರಣಕ್ಕೆ ಹೊಸ ಟ್ವಿಸ್ಟ್ ನೀಡಿದೆ.
ಈ ಕುರಿತಂತೆ ಸರಣಿ ಟ್ವಿಟ್ ಮಾಡಿದ್ದು, ‘ಸ್ಯಾಂಟ್ರೋ ರವಿ ನನಗೆ ಗೊತ್ತೇ ಇಲ್ಲ’ ಎಂದಿರುವ ಸಿಎಂ ಮಾತಿನಲ್ಲಿ ಸತ್ಯವಿದೆ! ಏಕೆಂದರೆ ಬಸವರಾಜ ಬೊಮ್ಮಾಯಿ ಅವರಿಗೆ ಆತ ಪರಿಚಯವಿರುವುದು ‘ಮಂಜುನಾಥ್’ ಆಗಿ! ಸ್ಯಾಂಟ್ರೋ ರವಿಯನ್ನು ಪೊಲೀಸರು ಬೊಮ್ಮಾಯಿಯವರ ಮನೆಯಲ್ಲೇ ಹುಡುಕಿದರೆ ಸಿಗುವ ಸಾಧ್ಯತೆ ಇದೆ! ಆತನನ್ನು ಹುಡುಕಲಾಗದಷ್ಟು ಪೊಲೀಸರು ಅಸಮರ್ಥರಾಗಿದ್ದಾರೆಯೇ ಅರಗ ಜ್ಞಾನೇಂದ್ರ ಅವರೇ? ಎಂದು ಕೇಳಿದೆ.
ಸರ್ಕಾರದ ಚೀಫ್ ಬ್ರೋಕರ್ ಸ್ಯಾಂಟ್ರೋ ರವಿಯನ್ನು ಬಂಧಿಸಲು ಪೊಲೀಸರಿಗೆ ಇದುವರೆಗೂ ಸಾಧ್ಯವಾಗಿಲ್ಲ, ಬಂಧಿಸುವುದು ಅಸಾದ್ಯವೇನೂ ಅಲ್ಲ, ಆದರೆ ಖುದ್ದು ಸರ್ಕಾರವೇ ಆತನ ರಕ್ಷಣೆಗೆ ಟೊಂಕ ಕಟ್ಟಿ ನಿಂತಿದೆ. ಕೇವಲ ತಿಪ್ಪೆ ಸಾರಿಸಲು ಕುಮಾರಕೃಪಾದ ಅಧಿಕಾರಿಯ ವರ್ಗಾವಣೆ ಮಾಡುವ ಮೂಲಕ ಬಿಜೆಪಿ ಸರ್ಕಾರ ಹಗರಣವನ್ನು ಒಪ್ಪಿಕೊಂಡಂತಾಗಿದೆ ಎಂದು ವಾಗ್ಧಾಳಿ ನಡೆಸಿದೆ.