ಬೆಂಗಳೂರು: ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಸಹಯೋಗದಲ್ಲಿ ಕೋವಿಡ್ ಎರಡನೇ ಅಲೆಯನ್ನು ಸಮರ್ಪಕ ರೀತಿಯಲ್ಲಿ ಎದುರಿಸುತ್ತಿದೆ. ಇನ್ನು ಮೂರನೇ ಅಲೆಯ ಮುನ್ಸೂಚನೆ ಇದ್ದು ಅದನ್ನು ಎದುರಿಸಲು ರಾಜ್ಯವನ್ನು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿರಿಸುವ ಗುರಿ ಹೊಂದಲಾಗಿದೆ ಎಂದು ಉಪಮುಖ್ಯಮಂತ್ರಿ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.
ಇಂದು ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯ ಬಳಿಕ ಮಾತನಾಡಿದ ಅಶ್ವತ್ ನಾರಾಯಣ್, ರಾಜ್ಯದಲ್ಲಿ ಕೊರೋನ ಮೂರನೇ ಎದುರಿಸುವ ದೃಷ್ಟಿಯಲ್ಲಿ ಆರೋಗ್ಯ ಮೂಲಸೌಕರ್ಯ ಅಭಿವೃದ್ಧಿಗೊಳಿಸಲು ₹1500 ಕೋಟಿ ವೆಚ್ಚ ಮಾಡಲು ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಟಾಸ್ಕ್ ಫೋರ್ಸ್ ಸಭೆಯಲ್ಲಿ ಕೋವಿಡ್ ನಿಯಂತ್ರಣದ ಬಗ್ಗೆ ಚರ್ಚಿಸಿ ಹಲವು ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಸದ್ಯದಲ್ಲೇ ಆರೋಗ್ಯ ಮೂಲಸೌಕರ್ಯ ಹೆಚ್ಚಿಸುವ ಅಗತ್ಯವಿದ್ದು, ತಾಲೂಕು ಮತ್ತು ಜಿಲ್ಲಾಸ್ಪತ್ರೆಗಳಲ್ಲಿ ಇನ್ನೂ ಹೆಚ್ಚಿನ ಗುಣಮಟ್ಟದ ಆರೋಗ್ಯ ವ್ಯವಸ್ಥೆ ಕಲ್ಪಿಸಲು ನಿರ್ಧರಿಸಲಾಗಿದೆ. ಅದಕ್ಕಾಗಿ ರಾಜ್ಯದ 146 ತಾಲೂಕು ಆಸ್ಪತ್ರೆ ಮತ್ತು 19 ಜಿಲ್ಲಾಸ್ಪತ್ರೆಗಳಲ್ಲೂ ಮೇಲ್ದರ್ಜೆಗೇರಿಸಲು ನಿರ್ಧರಿಸಲಾಗಿದೆ. ಕೋವಿಡ್ ಮೂರನೇ ಅಲೆ ಹಾಗೂ ಬ್ಲಾಕ್ ಫಂಗಸ್ ನಿಯಂತ್ರಣಕ್ಕೆ ಔಷಧಗಳ ದಾಸ್ತಾನು ಮಾಡಬೇಕಾಗಿದೆ. ಇವೆಲ್ಲ ಕೆಲಸಗಳಿಗೆ 800 ಕೋಟಿ ರೂ. ಅಗತ್ಯವಿದೆ ಹಾಗೂ ಬೆಂಗಳೂರಿನಲ್ಲಿ ಸುಸಜ್ಜಿತ ನೂತನ ಆಸ್ಪತ್ರೆ ತೆರೆಯುವ ಯೋಜನೆಯಿದ್ದು, ಒಟ್ಟು ₹ 1500 ಕೋಟಿ ರೂ.ಗಳ ಅಗತ್ಯವಿದೆ ಎಂದು ಡಿಸಿಎಂ ಮಾಹಿತಿ ನೀಡಿದ್ದಾರೆ.