ಗೊಡ್ಕಿ: ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಗೊಡ್ಕಿ ಜಿಲ್ಲೆಯಲ್ಲಿ ಇಂದು ಬೆಳಿಗ್ಗೆ ರೈಲುಗಳೆರಡರ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿ ಮೂವತ್ತಕ್ಕೂ ಹೆಚ್ಚು ಪ್ರಯಾಣಿಕರು ಮೃತಪಟ್ಟು ಹಲವರು ಗಾಯಗೊಂಡಿದ್ದಾರೆ.
ಸಿಂಧ್ ಪ್ರಾಂತ್ಯದ ರೆಟಿ ಮತ್ತು ದಹರ್ಕಿ ರೈಲು ನಿಲ್ಧಾಣದ ಮಧ್ಯೆ, ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಮತ್ತು ಮಿಲ್ಲಟ್ ಎಕ್ಸ್ ಪ್ರೆಸ್ ಮಧ್ಯೆ ಡಿಕ್ಕಿ ಸಂಭವಿಸಿ ಈ ದುರ್ಘಟನೆ ಸಂಭವಿಸಿದೆ. ಲಾಹೋರ್ ನಿಂದ ಹೊರಟಿದ್ದ ಸರ್ ಸೈಯದ್ ಎಕ್ಸ್ ಪ್ರೆಸ್ ರೈಲು ಅದು ತೆರಳಬೇಕಿದ್ದ ಹಳಿ ತಪ್ಪಿ ತೆರಳಿದ್ದು ಎದುರುಗಡೆಯಿಂದ ಅಂದರೆ ಕರಾಚಿಯಿಂದ ಸರಗೋಢ ಕಡೆಗೆ ಬರುತ್ತಿದ್ದ ಮಿಲಾತ್ ಎಕ್ಸ್ ಪ್ರೆಸ್ ರೈಲಿಗೆ ಡಿಕ್ಕಿ ಹೊಡೆದಿದೆ. ಇನ್ನು ಎರಡು ರೈಲುಗಳ ಹಲವಾರು ಬೋಗಿಗಳು ಹಳಿತಪ್ಪಿದ್ದು, ನೂರಾರು ಜನ ಅವಶೇಷಗಳಡಿ ಸಿಲುಕಿರುವ ಸಾಧ್ಯತೆ ಇದೆ. ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗುತ್ತಿದ್ದು, ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಅಪಘಾತದ ಬಗ್ಗೆ ಸುದ್ದಿ ತಿಳಿದು ಕಂಬನಿ ಮಿಡಿದಿರುವ ಪ್ರಧಾನಿ ಇಮ್ರಾನ್ ಖಾನ್ ವಿಸ್ತೃತ ತನಿಖೆಗೆ ಆದೇಶಿಸಿದ್ದಾರೆ.