ಸಮಗ್ರ ನ್ಯೂಸ್: ದ.ಕ ಜಿಲ್ಲೆಯ ಮೂಲ್ಕಿ ಸೀಮೆ ಅರಸು ಜೋಡುಕರೆ ಕಂಬಳದಲ್ಲಿ ಕಂಬಳ ಓಟಗಾರ ಕಂಬಳದ ಕೆರೆಯಲ್ಲಿ ಬಿದ್ದರೂ ಕೋಣದ ಹಗ್ಗ ಬಿಡದೆ ಪ್ರಥಮ ಸ್ಥಾನ ಪಡೆಯವಲ್ಲಿ ಯಶಸ್ವಿಯಾಗಿದ್ದಾನೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಓಟಗಾರ ವಂದಿತ್ ಶೆಟ್ಟಿ ಸಾಧನೆಗೆ ಎಲ್ಲೆಡೆ ಅಭಿನಂದನೆ ಕೇಳಿಬರುತ್ತಿದೆ. ಹಗ್ಗ ಹಿರಿಯ ವಿಭಾಗದ ಫೈನಲ್ ಹಣಾಹಣಿಯಲ್ಲಿ ನಂದಳಿಕೆ ಕೋಣವನ್ನು ಓಡಿಸಿದ ಬಂಬ್ರಾಣಬೈಲು ವಂದಿತ್ ಶೆಟ್ಟಿಯವರೇ ಈ ಸಾಧನೆ ಮೆರೆದ ತುಳುವ ಕುವರ.
ನಿನ್ನೆ(ಜ.1) ನಡೆದ ಮೂಲ್ಕಿ ಸೀಮೆ ಅರಸು ಜೋಡುಕೆರೆ ಕಂಬಳದಲ್ಲಿ ಈ ಘಟನೆ ನಡೆದಿದ್ದು, ಹಗ್ಗ ಹಿರಿಯ ವಿಭಾಗದ ಫೈನಲ್‌ನಲ್ಲಿ ಬಲಿಷ್ಠ ಕೋಣಗಳಾದ ನಂದಳಿಕೆ ಶ್ರೀಕಾಂತ್ ಭಟ್ ‘ಬಿ’ ಮತ್ತು ಪದವು ಕಾನಡ್ಕ ಪ್ಲೇವಿ ಡಿಸೋಜರ ಕೋಣಗಳ ಮಧ್ಯೆ ಸ್ಪರ್ಧೆ ನಡೆಯುತ್ತಿತ್ತು.
ಸುಮಾರು ಅರ್ಧ ಕರೆ ದಾಟುತ್ತಿದ್ದಂತೆ ನಂದಳಿಕೆ ಕೋಣಗಳನ್ನು ಓಡಿಸುತ್ತಿದ್ದ ವಂದಿತ್ ಶೆಟ್ಟಿ ಕಾಲು ಜಾರಿ ಕಂಬಳ ಕರೆಯಲ್ಲೇ ಬಿದ್ದುಬಿಟ್ಟರು. ಕಾಲು ಜಾರಿ ಬಿದ್ದರೂ ವಂದಿತ್ ಶೆಟ್ಟಿ ಅವರು ಸುಮಾರು 80 ಮೀಟರ್ ದೂರವನ್ನು ಹಗ್ಗ ಹಿಡಿದೇ ಕೋಣದ ಜತೆ ಬಂದು ಗುರಿ ತಲುಪಿದ್ದಾರೆ. 11.50 ಸೆಕೆಂಡ್‌ನಲ್ಲಿ ಅವರು ಗುರಿ ಮುಟ್ಟಿದ್ದಾರೆ. ಈ ಮೂಲಕ ಸ್ವರ್ಣ ಗೆಲ್ಲುವಲ್ಲಿ ಯಶಸ್ವಿಯಾದರು.