ಸಮಗ್ರ ನ್ಯೂಸ್: ನಿರಂತರವಾಗಿ ಜನರಿಗೆ ಕಾಟ ನೀಡುತ್ತಿದ್ದ ಮರಿ ಕಾಡಾನೆ ಜನರೇ ತೋಡಿದ್ದ ಕಂದಕಕ್ಕೆ ಬಿದ್ದ ಘಟನೆ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಹೊಸಕೊಪ್ಪಲು ಗ್ರಾಮದಲ್ಲಿ ನಡೆದಿದೆ.
ಕಾಡಾನೆಗಳ ಉಪಟಳದಿಂದ ರೋಸಿ ಹೋಗಿದ್ದ ಮಲೆನಾಡು ಭಾಗದ ಜನರು ಶಾಶ್ವತ ಪರಿಹಾರಕ್ಕೆ ಒತ್ತಾಯಿಸುತ್ತಲೇ ಬಂದಿದ್ದರು. ಆದರೆ ಸರ್ಕಾರ ಮಾತ್ರ ಶಾಶ್ವತ ಪರಿಹಾರ ಕಂಡುಹಿಡಿಯದ ಹಿನ್ನಲೆ ಗ್ರಾಮಸ್ಥರು ಒಟ್ಟು ಸೇರಿ ಆನೆ ಸೆರೆಗೆ ದೊಡ್ಡ ಕಂದಕ ತೋಡಿದ್ದಾರೆ. ಸದ್ಯ ಗ್ರಾಮಸ್ಥರು ತೋಡಿದ್ದ ಖೆಡ್ಡಾಕ್ಕೆ ಮರಿಯಾನೆಯೊಂದು ಬಿದ್ದಿದೆ.
ಹೊಸಕೊಪ್ಪಲು ಗ್ರಾಮಸ್ಥರು ಕಾಡಾನೆಗಳ ಭೀತಿಯಿಂದಲೇ ಜೀವಿಸುತ್ತಿದ್ದಾರೆ. ಸರ್ಕಾರ ಶಾಶ್ವತ ಪರಿಹಾರ ನೀಡಲು ಮನಸ್ಸು ಮಾಡದ ಹಿನ್ನಲೆ ಕಾಡಾನೆ ಕೆಡವಲು ಜನರು ಕಂದಕ ತೋಡಿದ್ದರು. ಸದ್ಯ ಮರಿಯಾನೆ ಕಂದಕಕ್ಕೆ ಬಿದ್ದಿರುವ ಸುದ್ದಿ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲು ಕ್ರಮ ಕೈಗೊಂಡಿದ್ದಾರೆ.
ಜೆಸಿಬಿ ಮೂಲಕ ಕಾಡಾನೆ ಹೊರ ತೆಗೆಯಲು ಅರಣ್ಯ ಇಲಾಖೆ ಅಧಿಕಾರಿಗಳ ತಯಾರಿ ನಡೆಸಿದ್ದು, ಸ್ಥಳಕ್ಕೆ ಬರುತ್ತಿದ್ದಂತೆ ರೈತರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ನೀವು ಒಂದು ಕಾಡಾನೆ ಹಿಡಿಯಲು 25 ಲಕ್ಷ ಖರ್ಚು ಮಾಡುತ್ತೀರಿ, ನಾವು ಕೇವಲ 25 ಸಾವಿರಕ್ಕೆ ಒಂದು ಕಾಡಾನೆ ಹಿಡಿದಿದ್ದೇವೆ ಎಂದು ರೈತರು ಹೇಳಿದರು.
ಕಂದಕಕ್ಕೆ ಬಿದ್ದಿರುವ ಕಾಡಾನೆಯನ್ನು ಮತ್ತೆ ಇದೇ ಪ್ರದೇಶದಲ್ಲಿ ಬಿಡುವುದಕ್ಕೆ ಒಪ್ಪದ ಗ್ರಾಮಸ್ಥರು ಬೇರೆಡೆ ಸ್ಥಳಾಂತರ ಮಾಡುವಂತೆ ಪಟ್ಟು ಹಿಡಿದಿದ್ದಾರೆ. ಅಲ್ಲದೆ ನಾವು ಗುಂಡಿ ತೆಗೆಯುವ ದಿನವೇ ಅರಣ್ಯ ಅಧಿಕಾರಿಗಳಿಗೆ ವಿಷಯ ತಿಳಿಸಿದ್ದೇವೆ. ಅಂದಿನಿಂದ ಇಲ್ಲಿಯವರೆಗೂ ಒಬ್ಬ ಅಧಿಕಾರಿಯೂ ಇತ್ತ ಸುಳಿದಿಲ್ಲ. ಇದೀಗ ಕಾಡಾನೆ ಬಿದ್ದ ಕೂಡಲೇ ಓಡೋಡಿ ಬಂದಿದ್ದೀರಿ ಎಂದು ಆರ್‌ಎಫ್‌ಓ ಶಿಲ್ಪಾ ಅವರನ್ನು ರೈತರು ತರಾಟೆ ತೆಗೆದುಕೊಂಡರು.