ಸಮಗ್ರ ನ್ಯೂಸ್: ಭಗವಾನ್ ರಾಮ ಮತ್ತು ಹನುಮಂತನ ಭಕ್ತಿ ಬಿಜೆಪಿಯ ಏಕಸ್ವಾಮ್ಯವಲ್ಲ. ಇತರರು ಶ್ರೀರಾಮ ಅಥವಾ ಹನುಮಂತನ ಭಕ್ತರಾಗಿರಲು ಸಾಧ್ಯವಿಲ್ಲ ಎಂದು ಬಿಜೆಪಿಯವರು ತಪ್ಪು ಕಲ್ಪನೆ ಹೊಂದಿರಬಾರದು ಎಂದು ಬಿಜೆಪಿ ನಾಯಕಿ ಮತ್ತು ಮಧ್ಯಪ್ರದೇಶದ ಮಾಜಿ ಮುಖ್ಯಮಂತ್ರಿ ಉಮಾಭಾರತಿ ಹೇಳಿದ್ದಾರೆ.
ಉಮಾಭಾರತಿ ಅವರ ಈ ಹೇಳಿಕೆಯಿಂದಾಗಿ ಪಕ್ಷಕ್ಕೆ ತೀವ್ರ ಮುಜುಗರವನ್ನುಂಟು ಮಾಡಿದೆ. ದೇವರುಗಳು ಯಾವುದೋ ಒಂದು ಜಾತಿ ಮತ್ತು ಧರ್ಮಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ರಾಮ ಮತ್ತು ಹನುಮಂತ ಬಿಜೆಪಿ ಕಾರ್ಯಕರ್ತರಿಗೆ ಸೇರಿದವರಲ್ಲ. ಭೂಮಿ ಮೇಲೆ ಮನುಷ್ಯರು ಹುಟ್ಟುವುದಕ್ಕೂ ಮುನ್ನವೇ, ಬ್ರಿಟಿಷರು ಆಳ್ವಿಕೆ ಪ್ರಾರಂಭಿಸುವುದಕ್ಕೂ ಮುನ್ನವೇ ದೇವರು ಅಸ್ತಿತ್ವದಲ್ಲಿದ್ದರು ಎಂದು ವ್ಯಂಗ್ಯವಾಡಿದ್ದಾರೆ.
ಇದೇ ವೇಳೆ ಹಿಂದೂಗಳು ತಮ್ಮ ಮನೆಗಳಲ್ಲಿ ಶಸ್ತ್ರಾಸ್ತ್ರಗಳನ್ನು ಇರಿಸಿಕೊಳ್ಳಬೇಕು ಎಂಬ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರ ವಿವಾದಾತ್ಮಕ ಹೇಳಿಕೆಗೆ ಉಮಾ ಭಾರತಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಆಯುಧಗಳನ್ನು ಇರಿಸಿಕೊಳ್ಳುವುದರಲ್ಲಿ ಯಾವುದೇ ತಪ್ಪಿಲ್ಲ. ಆದರೆ ಹಿಂಸಾತ್ಮಕ ಚಿಂತನೆಗಳನ್ನು ಹೊಂದುವುದು ತಪ್ಪು ಎಂದು ತಿಳಿಸಿದ್ದಾರೆ.
ಇತ್ತೀಚೆಗಷ್ಟೇ ಶಾರುಖ್ ಖಾನ್ ಅಭಿನಯಿಸಿರುವ ಪಠಾಣ್ ಚಿತ್ರ ಭಾರೀ ವಿವಾದವನ್ನುಂಟು ಮಾಡಿದ್ದು, ಈ ಕುರಿತಂತೆ ಸಹ ಉಮಾ ಭಾರತಿ ಪ್ರತಿಕ್ರಿಯಿಸಿ, ಆಕ್ಷೇಪಾರ್ಹ ದೃಶ್ಯಗಳನ್ನು ಬಿಜೆಪಿ ಸರ್ಕಾರದ ಸೆನ್ಸಾರ್ ಮಂಡಳಿ ಕೂಡಲೇ ತೆರವುಗೊಳಿಸಬೇಕು. ಇದರಲ್ಲಿ ರಾಜಕೀಯ ಮಾಡುವುದು ಅಗತ್ಯವಿಲ್ಲ ಎಂದಿದ್ದಾರೆ.
ಇತ್ತೀಚೆಗೆ ಕಾಂಗ್ರೆಸ್ ಹಿರಿಯ ಮುಖಂಡ ಭಾರತ್ ಜೋಡೋ ಯಾತ್ರೆಯನ್ನು ರಾಮಾಯಣಕ್ಕೆ ಹೋಲಿಸಿ, ರಾಹುಲ್ ಗಾಂಧಿಯನ್ನು ಭಗವಾನ್ ಶ್ರೀರಾಮನಿಗೆ ಹೋಲಿಕೆ ಮಾಡಿರುವುದಕ್ಕೆ ತಿರುಗೇಟು ನೀಡಿರುವ ಉಮಾ ಭಾರತಿ, ಬ್ರಹ್ಮಾಂಡದ ಅಧಿಪತಿ ಶ್ರೀರಾಮನನ್ನು ರಾಹುಲ್ ಗಾಂಧಿಗೆ ಹೋಲಿಸುವುದು ತಪ್ಪು. ಭಾರತಕ್ಕೆ ಯಾವುದೇ ಜೋಡೋ ಯಾತ್ರೆಯ ಅಗತ್ಯವಿಲ್ಲ ಎಂದು ಹೇಳಿದರು.