ಸಮಗ್ರ ನ್ಯೂಸ್: ಕಳೆದ ನವೆಂಬರ್ 18 ರಿಂದ ರಾಜ್ಯಾದ್ಯಂತ ಪಂಚರತ್ನ ರಥಯಾತ್ರೆ ಕೈಗೊಂಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಹೊಸ ದಾಖಲೆಗೆ ಪಾತ್ರರಾಗಿದ್ದಾರೆ.
ಪಂಚರತ್ನ ರಥಯಾತ್ರೆಯಲ್ಲಿ ರಾಜ್ಯದ ಜನರು ವಿವಿಧ ಬಗೆಯ ಬೃಹತ್ ಹಾರಗಳನ್ನು ಹಾಕಿ ಗೌರವಿಸಿದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿಗಳು ‘ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ‘ ಹಾಗೂ ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ‘ ದಾಖಲೆಗೆ ಪಾತ್ರರಾಗಿದ್ದಾರೆ.
ತುಮಕೂರು ಗ್ರಾಮಾಂತರ ಕ್ಷೇತ್ರದಲ್ಲಿ ನಿನ್ನೆ ಇಡೀ ದಿನ ಯಾತ್ರೆ ನಡೆಸಿ ಕಳೆದ ರಾತ್ರಿ ಕ್ಷೇತ್ರದ ಯಲ್ಲಾಪುರದಲ್ಲಿ ಮಾಜಿ ಮುಖ್ಯಮಂತ್ರಿಗಳು ಗ್ರಾಮ ವಾಸ್ತವ್ಯ ಹೂಡಿದ್ದರು. ಆ ಗ್ರಾಮಕ್ಕೆ ಆಗಮಿಸಿದ ‘ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ‘ ತೀರ್ಪುಗಾರರಾದ ಮೋಹಿತ್ ಕುಮಾರ್ ವತ್ಸ ಹಾಗೂ ‘ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ‘ ತೀರ್ಪುಗಾರರಾದ ಆರ್.ಹರೀಶ್ ಅವರು ಮಾಜಿ ಮುಖ್ಯಮಂತ್ರಿ ಅವರಿಗೆ ಎರಡೂ ದಾಖಲೆಗಳ ಪತ್ರಗಳು ಮತ್ತು ಮೆಡಲ್ ಗಳನ್ನು ನೀಡಿದ್ದಾರೆ.
ಈ ಸಂದರ್ಭದಲ್ಲಿ ಮಾತನಾಡಿದ ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ‘ ತೀರ್ಪುಗಾರರಾದ ಮೋಹಿತ್ ಕುಮಾರ್ ಅವರು, ಇದೊಂದು ವಿಶೇಷವಾದ ದಾಖಲೆ. ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ರಾಜಕಾರಣಿಯೊಬ್ಬರು ಗೌರವಕ್ಕೆ ಪಾತ್ರರಾಗಿರುವುದು ಹಾಗೂ ರೈತರೇ ಬೇಳೆಗಳನ್ನೇ ಬೃಹತ್ ಹಾರಗಳನ್ನಾಗಿ ತಯಾರಿಸಿ ಅವರಿಗೆ ಹಾಕಿ ಸ್ವಾಗತಿಸುತ್ತಿರುವುದು ಸೋಜಿಗ, ಮೊದಲ ದಾಖಲೆ ಎಂದರು.
ಈ ವೇಳೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿಯವರು, ನಾನು ರಥಯಾತ್ರೆ ಮಾಡುತ್ತಿರುವ ಎಲ್ಲಾ ಕಡೆ ಜನರು ನನ್ನನ್ನು ಪ್ರೀತಿಯಿಂದ ಸ್ವಾಗತ ಮಾಡುತ್ತಿದ್ದಾರೆ. ದೊಡ್ಡ ದೊಡ್ಡ ಹಾರಗಳನ್ನು ಹಾಕಿ ಸ್ವಾಗತ ಮಾಡುತ್ತಿದ್ದಾರೆ. ಆ ಜನರ ಪ್ರೀತಿಯಿಂದ ಮಾತ್ರ ಈ ದಾಖಲೆ ನಿರ್ಮಾಣವಾಗಲು ಸಾಧ್ಯವಾಗಿದೆ. ಹೀಗಾಗಿ ಈ ಎಲ್ಲಾ ದಾಖಲೆಯ ಹೆಗ್ಗಳಿಕೆ ರೈತರಿಗೆ ಮತ್ತು ಪಕ್ಷದ ಕಾರ್ಯಕರ್ತರಿಗೆ ಸಲ್ಲಬೇಕು ಎಂದರು.