ಸಮಗ್ರ ನ್ಯೂಸ್: ರಾಜ್ಯಕ್ಕೆ ಕೇಂದ್ರ ಸಚಿವ ಅಮಿತ್ ಶಾ ಭೇಟಿ ನೀಡುತ್ತಿರುವ ಹಿನ್ನೆಲೆಯಲ್ಲಿ ವಿಧಾನ ಮಂಡಲದ ಅಧಿವೇಶನವನ್ನು ಮೊಟಕುಗೊಳಿಸಿರುವುದರ ಕುರಿತು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಅಮಿತ್ ಶಾ ಮುಂದೆ ನಡು ಬಗ್ಗಿಸಿ ನಿಲ್ಲುವುದಕ್ಕಾಗಿ ಸದನ್ನವನ್ನೇ ಮೊಟಕುಗೊಳಿಸಿರುವುದು ಎಷ್ಟರ ಮಟ್ಟಿಗೆ ಸರಿ? ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
ಸದನವನ್ನು ಒಂದು ವಾರ ವಿಸ್ತರಿಸಿ, ಜನರ ಸಮಸ್ಯೆಗಳ ಕುರಿತು ವಿಸ್ತೃತ ಚರ್ಚೆಗೆ ಅವಕಾಶ ನೀಡಬೇಕು ಎಂದು ಒತ್ತಾಯಿಸುತ್ತೇನೆ. ಇನ್ನೂ ಹದಿನೈದು ದಿನ ಚರ್ಚಿಸಿದರೂ ಮುಗಿಯದಷ್ಟು ಜನರ ಸಮಸ್ಯೆಗಳಿವೆ. ಅವೆಲ್ಲವನ್ನೂ ಬದಿಗೊತ್ತಿ ಅಮಿತ್ ಶಾ ಅವರ ಎದರು ನಡುಬಗ್ಗಿಸಿ ನಿಲ್ಲಲು ಸದವನ್ನೇ ಮೊಟಕುಗೊಳಿಸಿರುವುದು ಜನತೆಯ ಮೇಲೆ ಬಿಜೆಪಿ ಸರ್ಕಾರಕ್ಕೆ ಇರುವ ಅಸಡ್ಡೆಯನ್ನು ತೋರಿಸುತ್ತಿದೆ ಎಂದು ಹೇಳಿದ್ದಾರೆ.
ಹಳೆಯ ಪಿಂಚಣಿ ಪದ್ಧತಿ ಮರುಜಾರಿ, ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ, ಚಿಕಿತ್ಸೆ ಸಿಗದೆ ತುಮಕೂರಿನಲ್ಲಿ ಬಾಣಂತಿ-ಹಸುಗೂಸು ಸಾವು ಇಂಥ ಹತ್ತಾರು ವಿಷಯಗಳು ಇನ್ನೂ ಚರ್ಚೆಯಾಗಬೇಕಿವೆ. ರಾಜ್ಯ ಬಿಜೆಪಿ ಸರ್ಕಾರಕ್ಕೆ ಇದ್ಯಾವುದೂ ಬೇಕಿಲ್ಲ. ಅವರಿಗೆ ಬೇಕಿರುವುದು ಅಮಿತ್ ಶಾ ಅವರ ಕೃಪಾಕಟಾಕ್ಷ ಮಾತ್ರ ಎಂದು ಟ್ವೀಟ್‌ಗಳಲ್ಲಿ ಕಿಡಿಕಾರಿದ್ದಾರೆ.