ಮಂಗಳೂರು ಜಂಕ್ಷನ್ ಮತ್ತು ವಿಜಯಪುರ ನಡುವೆ ಸಂಪರ್ಕ ನಡೆಸುವ ರೈಲು ಸೇವೆಯನ್ನು ವಿಸ್ತರಣೆ ಮಾಡಿ ಆದೇಶ ಹೊರಡಿಸಿದೆ.
ಪ್ರತಿದಿನ ವಿಜಯಪುರ- ಮಂಗಳೂರು ಜಂಕ್ಷನ್ ನಡುವೆ ರೈಲು ಸಂಚಾರ ನಡೆಸುತ್ತದೆ. ಕರ್ನಾಟಕದ ಕರಾವಳಿ ಮತ್ತು ಉತ್ತರ ಕರ್ನಾಟಕವನ್ನು ಸಂಪರ್ಕಿಸುವ ಏಕೈಕ ರೈಲು ಇದಾಗಿದೆ. ಈ ರೈಲಿಗೆ ಜನರಿಂದ ಸಹ ಉತ್ತಮ ಸ್ಪಂದನೆ ಸಿಕ್ಕಿದೆ.
ಹಿಂದಿನ ಆದೇಶದಂತೆ ವಿಜಯಪುರದಿಂದ ಹೊರಡುವ ರೈಲು ನಂಬರ್ 07377 ವಿಜಯಪುರ- ಮಂಗಳೂರು ಜಂಕ್ಷನ್ ಎಕ್ಸ್‌ಪ್ರೆಸ್ ರೈಲು ಸೇವೆಯು 31/1/2023ಕ್ಕೆ ಅಂತ್ಯವಾಗಬೇಕಿತ್ತು. ಹೊಸ ಆದೇಶದಂತೆ ರೈಲು ಸೇವೆಯನ್ನು 1/2/2023 ರಿಂದ 31/3/2023ರ ತನಕ ವಿಸ್ತರಣೆ ಮಾಡಲಾಗಿದೆ.
ಮಂಗಳೂರಿನಿಂದ ಹೊರಡುವ ರೈಲು ನಂಬರ್ 07378 ಮಂಗಳೂರು ಜಂಕ್ಷನ್-ವಿಜಯಪುರ ಎಕ್ಸ್‌ಪ್ರೆಸ್ ರೈಲು ಸೇವೆ 1/2/2023ರಂದು ಅಂತ್ಯಗೊಳ್ಳಬೇಕಿತ್ತು. ಈ ರೈಲು ಸೇವೆಯನ್ನು 2/2/2023 ರಿಂದ 1/4/2023ರ ತನಕ ವಿಸ್ತರಣೆ ಮಾಡಿ ಆದೇಶ ಹೊರಡಿಸಲಾಗಿದೆ.
ಹಾಸನ-ಅರಸೀಕೆರೆ ಮಾರ್ಗವಾಗಿ ಕರಾವಳಿ ಮತ್ತು ಉತ್ತರ ಕರ್ನಾಟಕಕ್ಕೆ ಸಂಪರ್ಕಿಸಲು ಇರುವುದು ಇದೊಂದೇ ರೈಲು. ಈ ರೈಲಿನ ಮಾರ್ಗವನ್ನು ಬದಲಾವಣೆ ಮಾಡಬಾರದು ಎಂದು ಒತ್ತಾಯಿಸಲಾಗಿದೆ. ಅಲ್ಲದೇ ಮಂಗಳೂರು ಜಂಕ್ಷನ್-ವಿಜಯಪುರ ಮಾರ್ಗದ ರೈಲಿನ ವೇಳಾಪಟ್ಟಿ ಪರಿಷ್ಕರಣೆ ಮಾಡಬೇಕು ಎಂಬ ಆಗ್ರಹ ಹಲವಾರು ದಿನಗಳಿಂದ ಇದೆ.