ಸಮಗ್ರ ನ್ಯೂಸ್: ಬದಲಾದ ಪರಿಸ್ಥಿತಿಯಲ್ಲಿ ಚೀನಾ ಮತ್ತು ಪಾಕಿಸ್ತಾನ ಒಟ್ಟಾಗಿದ್ದು, ಒಂದು ವೇಳೆ ಯುದ್ಧ ಸಂಭವಿಸಿದರೆ ಅದು ಎರಡೂ ದೇಶಗಳ ವಿರುದ್ಧವಾಗಿರಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.
ರಾಹುಲ್ ಗಾಂಧಿ ಅವರ ಯೂಟ್ಯೂಬ್ ಚಾನೆಲ್‌ನ ವೀಡಿಯೋದಲ್ಲಿ, ಭಾರತ್ ಜೋಡೋ ಯಾತ್ರೆಯ ಸಮಯದಲ್ಲಿ ಸಶಸ್ತ್ರ ಪಡೆಗಳ ಯೋಧರೊಂದಿಗೆ ಸಂವಾದ ನಡೆಸುವಾಗ, ”ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಸೇರಿಕೊಂಡಿವೆ.ಒಂದು ವೇಳೆ ಯುದ್ಧ ಸಂಭವಿಸಿದರೆ ಅದು ಎರಡೂ ದೇಶಗಳ ವಿರುದ್ಧವಾಗಿರಲಿದೆ..” ಎಂದು ಹೇಳಿದ್ದಾರೆ.
”ಇದು ಭಾರತದ ಪಾಲಿಗೆ ಒಳ್ಳೆಯ ಬೆಳವಣಿಗೆಯಲ್ಲ. ಹೀಗಾಗಿ ಯುದ್ಧ ನಡೆದರೆ ದೇಶಕ್ಕೆ ದೊಡ್ಡ ನಷ್ಟವಾಗಲಿದೆ. ಭಾರತ ಈಗ ಅತ್ಯಂತ ದುರ್ಬಲವಾಗಿದೆ. ನನಗೆ ನಮ್ಮ ಸೇನೆಯ ಬಗ್ಗೆ ಕೇವಲ ಗೌರವ ಮಾತ್ರವಲ್ಲ, ಪ್ರೀತಿ ಮತ್ತು ವಾತ್ಸಲ್ಯವೂ ಇದೆ. ನೀವು ಈ ರಾಷ್ಟ್ರವನ್ನು ರಕ್ಷಿಸುವವರು. ನೀವಿಲ್ಲದೇ ಭಾರತವಿಲ್ಲ..” ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
”ಚೀನಾ ಮತ್ತು ಪಾಕಿಸ್ತಾನ ಒಟ್ಟಿಗೆ ಸೇರದಂತೆ ಅವುಗಳನ್ನು ಪ್ರತ್ಯೇಕವಾಗಿ ಇಡುವುದು ಈ ಹಿಂದೆ ನಾವು ಅನುಸರಿಸಿಕೊಂಡು ಬಂದ ನೀತಿಯಾಗಿತ್ತು. ಆದರೆ ಪ್ರಸ್ತುತ ಸರ್ಕಾರ ಈ ನೀತಿಯನ್ನು ಕೈಬಿಟ್ಟಿದ್ದರಿಂದ ತೊಂದರೆ ಸೃಷ್ಟಿಯಾಗಿದೆ. ಈಗ ನಾವು ಪಾಕಿಸ್ತಾನ, ಚೀನಾ ಹಾಗೂ ಭಯೋತ್ಪಾದನೆಯನ್ನು ಒಟ್ಟಾಗಿ ಎದುರಿಸುವ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದೇವೆ..” ಎಂದು ರಾಹುಲ್ ಗಾಂಧಿ ಕಳವಳ ವ್ಯಕ್ತಪಡಿಸಿದ್ದಾರೆ.
”ಲಡಾಖ್, ಅರುಣಾಚಲ ಪ್ರದೇಶದ ಗಡಿಯಲ್ಲಿ ಏನಾಗುತ್ತಿದೆ ಎಂಬುದನ್ನು ಕೇಂದ್ರ ಸರ್ಕಾರ ಈ ದೇಶದ ಜನತೆಗೆ ತಿಳಿಸಬೇಕು. ಗಡಿ ರಕ್ಷಣೆಯಲ್ಲಿ ನಾವು ವೇಗವಾಗಿ ಕಾರ್ಯೋನ್ಮುಖರಾಗದಿದ್ದರೆ, ಮುಂದಿನ ದಿನಗಳಲ್ಲಿ ಭಾರೀ ಬೆಲೆ ತೆರಬೇಕಾಗುತ್ತದೆ..”ಎಂದು ರಾಹುಲ್ ಗಾಂಧಿ ಇದೇ ವೇಳೆ ಎಚ್ಚರಿಸಿದ್ದಾರೆ.