ಸಮಗ್ರ ನ್ಯೂಸ್: ಹಿರಿಯ ಯಕ್ಷಗಾನ ಕಲಾವಿದ ಗುರುವಪ್ಪ ಬಾಯಾರು (58) ರಂಗಸ್ಥಳದಲ್ಲೇ ಸಂಭವಿಸಿದ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಇವರು ದ.ಕ ಜಿಲ್ಲೆಯ ಮಂಗಳೂರು ತಾಲೂಕಿನ ಕಟೀಲು ಮೇಳದ ಕಲಾವಿದರಾಗಿದ್ದರು. ಕಟೀಲಿನ ಸರಸ್ವತೀ ಸದನದಲ್ಲಿ ʼತ್ರಿಜನ್ಮ ಮೋಕ್ಷʼ ಯಕ್ಷಗಾನ ನಡೆಯುತ್ತಿದ್ದ ಸಂದರ್ಭದಲ್ಲಿ ಇವರಿಗೆ ಹೃದಯಾಘಾತವಾಗಿದೆ.
ಕಟೀಲು ದೇವಸ್ಥಾನದಲ್ಲಿ ಆರು ಯಕ್ಷಗಾನ ಮೇಳಗಳಿದ್ದು, ಇವರು ನಾಲ್ಕನೇ ಮೇಳದ ಕಲಾವಿದರಾಗಿದ್ದಾರೆ. ʼತ್ರಿಜನ್ಮ ಮೋಕ್ಷʼ ಯಕ್ಷಗಾನದ ಅಂತಿಮ ಭಾಗದಲ್ಲಿ ಶಿಶುಪಾಲ- ದಂತವಕ್ತ್ರರ ವಧೆಯ ಪ್ರಸಂಗವಿದ್ದು, ಇದರಲ್ಲಿ ಗುರುವಪ್ಪ ಅವರು ಶಿಶುಪಾಲನ ಪಾತ್ರ ವಹಿಸಿದ್ದರು. ಕಾರ್ಯಕ್ರಮದ ಕೊನೆಯವರೆಗೂ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಿದ ಅವರು, ಕೊನೆಯ ಹತದಲ್ಲಿ ಹೃದಯಾಘಾತದಿಂದ ರಂಗಸ್ಥಳದಿಂದ ಕೆಳಗೆ ಕುಸಿದು ಬಿದ್ದಿದ್ದಾರೆ. ಕೂಡಲೇ ಕಾರ್ಯಕ್ರಮ ನಿಲ್ಲಿಸಿ ಗುರುವಪ್ಪ ಅವರನ್ನು ಉಪಚರಿಸಿ ಆಸ್ಪತ್ರೆಗೆ ಕೊಂಡೊಯ್ದರೂ ಚಿಕಿತ್ಸೆ ಫಲಕಾರಿಯಾಗದೇ ನಿಧನರಾಗಿದ್ದಾರೆ.
ಗುರುವಪ್ಪ ಬಾಯಾರು ಅವರು ಕಟೀಲು ಮೇಳದಲ್ಲಿ ಹಲವು ದಶಕಗಳಿಂದ ಪಾತ್ರ ನಿರ್ವಹಿಸುತ್ತಿದ್ದು, ಎರಡನೇ ಹಾಗೂ ಬಣ್ಣದ ವೇಷಗಳ ನಿರ್ವಹಣೆಗೆ ಖ್ಯಾತರಾಗಿದ್ದರು. ದೇವಿ ಮಹಾತ್ಮೆಯ ವಿದ್ಯುನ್ಮಾಲಿ ಮುಂತಾದ ಪಾತ್ರಗಳನ್ನು ನಿರ್ವಹಿಸುತ್ತಿದ್ದರು.