ಸಮಗ್ರ ನ್ಯೂಸ್: ಶಾಮನೂರು ಶಿವಶಂಕರಪ್ಪ ಪುತ್ರ ಎಸ್.ಎಸ್. ಮಲ್ಲಿಕಾರ್ಜುನ ಅವರ ರೈಸ್ ಮಿಲ್ನಲ್ಲಿ 29 ವನ್ಯ ಜೀವಿಗಳು ಪತ್ತೆಯಾಗಿವೆ. ದಾವಣಗೆರೆ ನಗರದ ಬಂಬೂಬಜಾರ್ ರಸ್ತೆಯಲ್ಲಿ ಇರುವ ಕಲ್ಲೇಶ್ವರ ರೈಸ್ ಮಿಲ್ ಮೇಲೆ ನಿನ್ನೆ ಬೆಂಗಳೂರು ಸಿಸಿಬಿ ಹಾಗೂ ಅರಣ್ಯ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ 29 ವನ್ಯ ಜೀವಿಗಳು ಪತ್ತೆಯಾಗಿವೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ ಹೆಬ್ಬಾಳದಲ್ಲಿ ಸಂಥೀಲ್ ಎಂಬಾತನನ್ನು ಸಿಸಿಬಿ ಪೊಲೀಸರು ಅರೆಸ್ಟ್ ಮಾಡಿದ್ದರು. ಅರೆಸ್ಟ್ ಮಾಡಿದ ಆರೋಪಿ ಬಳಿ ಕೃಷ್ಣ ಮೃಗದ ಕೊಂಬು, ಜಿಂಕೆ ಚರ್ಮ ಮತ್ತು ಕಾಡು ಹಂದಿಯ ಕೋರೆ ಪತ್ತೆಯಾಗಿತ್ತು. ಆತನ ತನಿಖೆ ವೇಳೆ ಹೊರಬಿದ್ದ ಸುಳಿವಿನ ಆಧಾರದ ಮೇಲೆ ಸಿಸಿಬಿ ಪೊಲೀಸರು ದಾಳಿ ನಡೆಸಿದ್ದು 29 ವನ್ಯ ಜೀವಿಗಳು ಪತ್ತೆಯಾಗಿವೆ.
ಸೆಂಥೀಲ್ ನೀಡಿದ ಮಾಹಿತಿ ಆಧರಿಸಿ ಸಿಸಿಬಿ, ಎಸಿಪಿ ರೀರ್ನಾ ಸುವರ್ಣ ನೇತ್ರತ್ವದ ತಂಡ, ಇನ್ಸ್ಪೆಕ್ಟರ್ಗಳಾದ ಹಜರೇಶ್ ಮತ್ತು ದುರ್ಗಾ ನೇತ್ರತ್ವದ ತಂಡ ಸೇರಿ ದಾವಣಗೆರೆ ಅರಣ್ಯ ಅಧಿಕಾರಿಗಳ ಜಂಟಿ ಕಾರ್ಯಾಚರಣೆ ನಡೆಸಿದ್ದು ದಾಳಿ ವೇಳೆ ಚುಕ್ಕೆ ಜಿಂಕೆ 7, ಕೃಷ್ಣಮೃಗ 10, ನರಿ 2, ಕಾಡು ಹಂದಿ 4, ಮುಂಗುಸಿ 3 ಹೀಗೆ ಒಟ್ಟು 29 ವನ್ಯ ಜೀವಿಗಳು ಪತ್ತೆಯಾಗಿವೆ. ವನ್ಯ ಪ್ರಾಣಿಗಳು ಪತ್ತೆ ಹಿನ್ನೆಲೆ ದಾವಣಗೆರೆ ಅರಣ್ಯ ವಿಭಾಗದಲ್ಲಿ ಪ್ರತ್ಯೇಕ ಕೇಸ್ ದಾಖಲಾಗಿದೆ.