ಸಮಗ್ರ ನ್ಯೂಸ್: ಆರೋಗ್ಯ ಎನ್ನುವುದು ಮಾರುಕಟ್ಟೆಯಲ್ಲಿ ಸಿಗುವ ವಸ್ತು ಅಲ್ಲ. ನಮ್ಮ ಆರೋಗ್ಯದ ಗುಟ್ಟು ಮತ್ತು ಜುಟ್ಟು ನಮ್ಮ ಕೈಯಲ್ಲಿಯೇ ಇದೆ. ನಾವು ತಿನ್ನುವ ಆಹಾರದ ಮೇಲೆ ನಿಯಂತ್ರಣ, ನಮ್ಮ ಧನಾತ್ಮಕ ಚಿಂತನಾ ಲಹರಿ ಮತ್ತು ದೈಹಿಕ ಚಟುವಟಿಕೆಗಳಿಂದ ಕೂಡಿದ ಜೀವನ ಶೈಲಿ ಮತ್ತು ಒತ್ತಡ ಮುಕ್ತ ಕೆಲಸದ ವಾತಾವರಣ ನಾವು ಸೃಷ್ಟಿಸಿಕೊಂಡಲ್ಲಿ ನಮಗೆ ಯಾವುದೇ ರೋಗ ಬರುವ ಸಾಧ್ಯತೆ ಇಲ್ಲ. ನಮ್ಮ ಹೆಚ್ಚಿನ ಎಲ್ಲಾ ರೋಗಗಳಾದ ಅಧಿಕ ರಕ್ತದೊತ್ತಡ, ಮಧುಮೇಹ ಮತ್ತು ಹೃದಯಾಘಾತ ಮುಂತಾದ ರೋಗಗಳು ನಮ್ಮ ದೋಷಪೂರಿತ ಆಹಾರ, ಋಣಾತ್ಮಕ ಚಿಂತನೆ, ವ್ಯಾಯಾಮವಿಲ್ಲದ ಜೀವನ ಪದ್ಧತಿ ಮತ್ತು ಅತಿಯಾದ ಒತ್ತಡದ ಜೀವನ ಶೈಲಿಯಿಂದ ಬರುತ್ತದೆ ಎಂದು ಡಾ|| ಮುರಲೀ ಮೋಹನ್ ಚೂಂತಾರು ಅವರು ಹೇಳಿದ್ದಾರೆ.
ಅವರು ಸುರತ್ಕಲ್ ಪರಿಸರದ ಕೃಷ್ಣಾಪುರದ ಅಂಬೇಡ್ಕರ್ ಸಭಾ ಭವನದಲ್ಲಿ ಆರೋಗ್ಯ ಭಾರತಿ ಮಂಗಳೂರು ಮತ್ತು ಅಭ್ಯುದಯ ಭಾರತಿ ಸೇವಾ ಟ್ರಸ್ಟ್ (ರಿ) ಗಣೇಶ ಪುರ ಕಾಟಿಪಳ್ಳ ಇದರ ಆಶ್ರಯದಲ್ಲಿ ದಿ. ಅಜಿತ್ ಕುಮಾರ್ ಅವರ ಪುಣ್ಯ ತಿಥಿಯ ಅಂಗವಾಗಿ ನಡೆದ ಸೇವಾ ಸಪ್ತಾಹದ ಅಂಗವಾಗಿ ನಡೆದ ಆರೋಗ್ಯ ಮಾಹಿತಿ ಶಿಬಿರ ಇದರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆರೋಗ್ಯ ಭಾರತಿ ಮಂಗಳೂರು ಇದರ ಗೌರವ ಅಧ್ಯಕ್ಷರಾದ ಡಾ|| ಮುರಲೀ ಮೋಹನ್ ಚೂಂತಾರು ಅವರು ಆರೋಗ್ಯ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ಆರೋಗ್ಯ ಭಾರತಿ ವಿಭಾಗದ ಸಂಚಾಲಕರಾದ ಶ್ರೀ ಪುರುಷೋತ್ತಮ್. ಗೌಡ ದೇವಸ್ಯಮತ್ತು ಶ್ರೀ ವಸಂತ್ ರಾಜ್, ಮಾನ್ಯ ಸಂಘ ಚಾಲಕರು ಕಾಟಿಪಳ್ಳ ಉಪಸ್ಥಿತರಿದ್ದರು. ಸುಮಾರು ೩೫ ಮಂದಿ ಈ ಶಿಬಿರದಲ್ಲಿ ಭಾಗವಹಿಸಿದ್ದರು.