ಸಮಗ್ರ ನ್ಯೂಸ್: ಆಡಳಿತ ಪಕ್ಷ ಬಿಜೆಪಿಯನ್ನು ವಿಧಾನಮಂಡಲ ಕಲಾಪದಲ್ಲಿ ಇಕ್ಕಟ್ಟಿಗೆ ಸಿಲುಕಿಸಲು ಕಾಂಗ್ರೆಸ್ ಸಜ್ಜಾಗಿದ್ದು, ಗಡಿ ವಿಚಾರ ಹಾಗೂ ಎಸ್‌ಸಿ- ಎಸ್‌ಟಿ ಮೀಸಲಾತಿ ಸಂಬಂಧಿತ ಚರ್ಚೆಗೆ ಅವಕಾಶ ಕೊಡುವಂತೆ ಕೋರಿ ಇಂದು ನಿಲುವಳಿ ಸೂಚನೆ ಮಂಡಿಸಲಿದೆ.
ಸದನದಲ್ಲಿ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ತಗಾದೆ ವಿಚಾರವನ್ನು ಕಾಂಗ್ರೆಸ್ ಪ್ರಸ್ತಾಪ ಮಾಡಲಿದೆ. ಎರಡೂ ಕಡೆ ಬಿಜೆಪಿ ಸರ್ಕಾರವಿದ್ದರೂ ಯಾಕೆ ಚುನಾವಣೆ ಸಮಯದಲ್ಲಿ ಈ ರೀತಿಯ ತಗಾದೆ ಎಂದು ಬಿಜೆಪಿ ವಿರುದ್ಧ ಕೈ ಕಲಿಗಳು ಗುಟುರು ಹಾಕಲಿದ್ದಾರೆ. ಬಳಿಕ ಉತ್ತರ ಕರ್ನಾಟಕದ ಸಮಸ್ಯೆಗಳನ್ನು ಪ್ರಸ್ತಾಪ ಮಾಡಲು ನಿರ್ಧರಿಸಲಾಗಿದೆ. ಕಬ್ಬು ಸೇರಿದಂತೆ ವಿವಿಧ ಬೆಳೆಗಳ, ಬೆಳೆಗಾರರ ಸಮಸ್ಯೆ ಬಗ್ಗೆ ಚರ್ಚೆ ನಡೆಸಲಿದ್ದು, ಕಬ್ಬು ಬೆಲೆ ಏರಿಕೆ ಬಗ್ಗೆ ಚರ್ಚೆಗೆ ಅವಕಾಶ ಕೇಳಲಿದೆ.
ಎಸ್‌ಸಿ- ಎಸ್‌ಟಿ ಮೀಸಲಾತಿಯ ಕ್ರೆಡಿಟ್‌ಗಾಗಿ ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ಆಗುವ ಸಾಧ್ಯತೆ ಇದೆ. ಅವರ ಕಾಲದಲ್ಲಿ ಮೀಸಲಾತಿ ಏರಿಕೆ ಆಗಿಲ್ಲ, ನಾವು ಮಾಡಿದ್ದೇವೆ ಎಂದು ಸಿಎಂ ಮತ್ತು ಬಿಜೆಪಿ ಸದಸ್ಯರಿಂದ ಕಾಂಗ್ರೆಸ್ ನಿಲುವಳಿಗೆ ವಿರೋಧ ವ್ಯಕ್ತವಾಗಬಹುದು.
ವೋಟರ್ ಲಿಸ್ಟ್‌ನಲ್ಲಿ ಹೆಸರು ಡಿಲೀಟ್ ಮಾಡಿದ ಪ್ರಕರಣ, ಸರ್ಕಾರಿ ಕಾಮಗಾರಿಗಳಲ್ಲಿ 40% ಕಮಿಷನ್, ಶಾಸಕರ ಅನುದಾನ ತಾರತಮ್ಯ ವಿಚಾರ, ಕಬ್ಬು ಬೆಳೆಗಾರರ ಹೋರಾಟ, ಬೆಂಬಲ ಬೆಲೆ, ಬೆಳೆ ಹಾನಿ ಪರಿಹಾರ, ಹಾಲು ಉತ್ಪಾದನೆ 20 ಲಕ್ಷ ಲೀಟರ್ ಕಡಿಮೆಯಾಗಿರುವುದು, ದನಕರುಗಳಿಗೆ ಗಂಟು ರೋಗ, ತೊಗರಿ ಬೆಳೆಗೆ ರೋಗ, ಅಡಿಕೆಗೆ ಎಲೆಚುಕ್ಕೆ ರೋಗ, ಆನೆ- ಚಿರತೆ ದಾಳಿ ಸೇರಿದಂತೆ ಇನ್ನೂ ಹಲವು ವಿಚಾರಗಳನ್ನು ಪ್ರಸ್ತಾಪ ಮಾಡಿ ಚರ್ಚೆಗೆ ಎಳೆಯಲು ಕಾಂಗ್ರೆಸ್ ನಿರ್ಧಾರ ಮಾಡಿದೆ.