ಸಮಾಚಾರ ವರದಿ: ಸಾಮಾನ್ಯವಾಗಿ ಪರೀಕ್ಷೆಗಳು ಅಂದಾಗ ಮಕ್ಕಳಿಗೆ ಕಲಿಸಿದ್ದನ್ನೇ ಪ್ರಶ್ನೆಗಳನ್ನಾಗಿ ಕೇಳಿ ಉತ್ತರ ಪಡೆದುಕೊಳ್ತಾರೆ. ಸರಿ ಉತ್ತರ ಬರೆದವ್ನು ಪಾಸ್ ಆದ್ರೆ ಉತ್ತರ ಸರಿ ನೀಡದವ್ನಿಗೆ ಕಡಿಮೆ ಅಂಕವೋ ಅಥವಾ ಫೇಲೋ ಆಗ್ತಾನೆ. ಆದ್ರೆ ಎಕ್ಸಾಮಿನರ್ ತಪ್ಪು ಪ್ರಶ್ನೆ ಕೇಳಿ ಸರಿ ಉತ್ತರ ನಿರೀಕ್ಷಿಸಿದರೆ ಆಗೋದೇನು? ಇಲ್ಲಿ ಆಗಿದ್ದು ಅದೇ.
ಪಾಠದಲ್ಲಿ ಇಲ್ಲದ ಪ್ರಶ್ನೆ ಕೇಳಿದ್ದು, ಮಕ್ಕಳಿಗೆ ಉತ್ತರಿಸಲಾಗದೇ ಹೆಚ್ಚೂ ಕಮ್ಮಿ ಎಲ್ಲಾ ಮಕ್ಕಳು ಫೇಲಾದ ಪ್ರಸಂಗ ನಡೆದಿದೆ. ಅಂದ ಹಾಗೆ ಈ ಪರೀಕ್ಷೆ ನಡೆದದ್ದು ಅಂತಿಮ ಸೆಮಿಸ್ಟರ್ ನ ಐಟಿಐ ವಿದ್ಯಾರ್ಥಿಗಳಿಗೆ.
ಅಂತಿಮ ವರ್ಷದ ಐಟಿಐ ಪರೀಕ್ಷೆಯಲ್ಲಿ ಎಲೆಕ್ಟಿಕ್ ವಿಭಾಗದ ಬರೋಬ್ಬರಿ ಐದು ಪ್ರಶ್ನೆಗಳನ್ನು ಇಂಜಿನಿಯರ್ ಡ್ರಾಯಿಂಗ್ ವಿಭಾಗದ ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಪರೀಕ್ಷಾ ವಿಭಾಗದವರ ಎಡವಟ್ಟು ಮಕ್ಕಳಿಗೆ ಗೊತ್ತಾಗಿ ತಕ್ಷಣ ಪರೀಕ್ಷಾ ಸಿಬ್ಬಂದಿಯವರಿಗೆ ಕೇಳಿದರೂ, ಪರವಾಗಿಲ್ಲ ನಿಮಗೆ ಗೊತ್ತಿರೋದನ್ನ ಬರೀರಿ, ಗ್ರೇಸ್ ಮಾರ್ಕ್ಸ್ ಕೊಡ್ತಾರೆ ಅಂತ ಹೇಳಿದ್ದಾರೆ. ಒಟ್ಟು 50 ಅಂಕದ ಪ್ರಶ್ನೆ ಪತ್ರಿಕೆಯಲ್ಲಿ 40 ಅಂಕದ ಪ್ರಶ್ನೆಗಳು ಬೇರೆ ವಿಭಾಗದ ಪ್ರಶ್ನೆಗಳಾಗಿದ್ದು, ಗ್ರೇಸ್ ಮಾರ್ಕ್ಸ್ ಸಿಗುತ್ತೆ ಅಂತ ಮಕ್ಕಳು ಪರೀಕ್ಷೆ ಬರೆದು ತೆರಳಿದ್ದಾರೆ. ಆದರೆ ಕಳೆದ ಮೇ.ನಲ್ಲಿ ಫಲಿತಾಂಶ ಬಂದಾಗ ಅಷ್ಟೂ ಮಕ್ಕಳು ಅದೊಂದೇ ವಿಷಯದಲ್ಲಿ ಫೇಲಾಗಿದ್ದು, ತಮ್ಮದಲ್ಲದ ತಪ್ಪಿಗೆ ಪರಿತಪಿಸುವಂತಾಗಿದೆ. ಶಿಕ್ಷಕರ, ತಜ್ಞರ ಎಡವಟ್ಟಿನಿಂದ ಮಕ್ಕಳ ಭವಿಷ್ಯ ಹಾಳಾಗಿದ್ದು, ಸಂಬಂಧಿಸಿದವರು ಕೂಡಲೇ ಕ್ರಮ ತೆಗೆದುಕೊಳ್ಳಲು ಪೋಷಕರು ಆಗ್ರಹಿಸಿದ್ದಾರೆ.