ಮಂಗಳೂರು: ಇಲ್ಲಿನ ಖಾಸಗಿ ಆಸ್ಪತ್ರೆ ವಿರುದ್ಧ ಪ್ರತಿಭಟಿಸಿ ಧರಣಿ ಕೂತಿದ್ದ ಯುವ ಕಾಂಗ್ರೆಸ್ ಮುಖಂಡ ಸುಹೈಲ್ ಕಂದಕ್ ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದುಬಂದಿದೆ.
ಕೊರೊನಾ ಸೋಂಕಿತ ವ್ಯಕ್ತಿಯೊಬ್ಬರು ಮೃತಪಟ್ಟಾಗ ಅವರ ಕುಟುಂಬಕ್ಕೆ ಹತ್ತು ಲಕ್ಷಕ್ಕೂ ಅಧಿಕ ಬಿಲ್ ಮಾಡಿದ್ದ, ಮೃತದೇಹ ನೀಡದೆ ಸತಾಯಿಸಿದ ಖಾಸಗಿ ಆಸ್ಪತ್ರೆ ವಿರುದ್ಧ ಸುಹೈಲ್ ಕಂದಕ್ ಹಾಗೂ ಯುವ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಿ ಧರಣಿ ಕೂತಿದ್ದರು. ಪ್ರತಿಭಟನೆಗೆ ಮಣಿದ ಆಸ್ಪತ್ರೆ ಮೃತದೇಹ ಹಸ್ತಾಂತರ ಮಾಡಿದ್ದರು.
ಘಟನೆ ನಡೆದು ಹಲವು ದಿನಗಳು ಕಳೆದರೂ ಇಂದು ಖಾಸಗಿ ಆಸ್ಪತ್ರೆಯವರು ಮಂಗಳೂರು ನಗರ ಠಾಣೆಯಲ್ಲಿ ಸುಹೈಲ್ ಕಂದಕ್ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದಲ್ಲಿ ಸುಹೈಲ್ ಕಂದಕ್ ಅವರನ್ನು ವಶಕ್ಕೆ ಪಡೆಯಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬಂಧನ ಪ್ರಕರಣದಲ್ಲಿ ಬಿಜೆಪಿ ಮುಖಂಡರ ಕೈವಾಡ ಇದೆ, ಪೊಲೀಸರ ಮೇಲೆ ಬಿಜೆಪಿ ನಾಯಕರಿಂದ ಒತ್ತಡವಿದೆ ಎಂದು ಸುಹೈಲ್ ಕಂದಕ್ ಆರೋಪಿಸಿದ್ದಾರೆ.
ಠಾಣೆ ಮುಂದೆ ಕಾಂಗ್ರೆಸ್ ನಾಯಕರು ಕಾರ್ಯಕರ್ತರು ಜಮಾಯಿಸಿ ಪಕ್ಷದ ಮುಖಂಡನನ್ನು ಬಿಡುಗಡೆಗೊಳಿಸುವಂತೆ ಒತ್ತಾಯಿಸಿದ್ದಾರೆ.