ಉದ್ಯೋಗ ಸಮಾಚಾರ: ಕರ್ನಾಟಕ ರಾಜ್ಯ ಸರ್ಕಾರವು ಅಬಕಾರಿ ಇಲಾಖೆಯಲ್ಲಿ ಖಾಲಿ ಇರುವ ಒಟ್ಟು 1,100 ಹುದ್ದೆಗಳನ್ನು ಭರ್ತಿ ಮಾಡಲು ಕೆಪಿಎಸ್‌ಸಿಗೆ ಪ್ರಸ್ತಾವನೆ ಸಲ್ಲಿಸಿದೆ. ಅಬಕಾರಿ ಇಲಾಖೆ ಸಚಿವ ಕೆ.ಗೋಪಾಲಯ್ಯ ಅವರು ಈ ಕುರಿತು ಮಾಹಿತಿ ನೀಡಿದ್ದಾರೆ.
ಇಲಾಖೆಯ ಒಟ್ಟು 1,100 ಹುದ್ದೆಗಳ ಪೈಕಿ 1000 ಅಬಕಾರಿ ಪೇದೆ ಹುದ್ದೆ, 100 ಅಬಕಾರಿ ಸಬ್ ಇನ್ಸ್‌ಪೆಕ್ಟರ್ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಸಚಿವರು ಹೇಳಿದ್ದಾರೆ.
ರಾಜ್ಯ ಬೊಕ್ಕಸಕ್ಕೆ ಹೆಚ್ಚು ಆದಾಯ ತಂದುಕೊಡುವ ಅಬಕಾರಿ ಇಲಾಖೆಯ ಬಲವರ್ಧನೆಗೆ ಸರ್ಕಾರ ಪ್ರಾಧ್ಯಾನತೆ ನೀಡಿದೆ. ಈ ವರ್ಷ 29000 ಕೋಟಿ ರೂ ಆದಾಯ ಗುರಿ ನೀಡಿದ್ದು, ಈವರೆಗೆ 19,897 ಕೋಟಿ ರೂ ಸಂಗ್ರಹವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 17,225 ಕೋಟಿ ರೂ ಸಂಗ್ರಹವಾಗಿತ್ತು ಎಂದು ಗೋಪಾಲಯ್ಯ ತಿಳಿಸಿದ್ದಾರೆ.
ಸರ್ಕಾರಿ ಹುದ್ದೆ ಆಕಾಂಕ್ಷಿಗಳ ಗಮನಕ್ಕೆ
2021 ರ ಸೆಪ್ಟೆಂಬರ್ ಅಂತ್ಯಕ್ಕೆ ಅಬಕಾರಿ ಇಲಾಖೆಯಲ್ಲಿ ಮಂಜುರಾದ ಹುದ್ದೆಗಳು 5812, ಕಾರ್ಯನಿರ್ವಹಿಸುತ್ತಿರುವ ಹುದ್ದೆಗಳು 4057, ಒಟ್ಟು ಖಾಲಿ ಹುದ್ದೆಗಳ ಸಂಖ್ಯೆ 1755 ಎಂದು ಈ ಹಿಂದೆ ಇಲಾಖಾ ಸಚಿವರು ಮಾಹಿತಿ ನೀಡಿದ್ದರು.
ಅಬಕಾರಿ ಪೇದೆ ಹುದ್ದೆಗೆ ಪಿಯುಸಿ, ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪದವಿ ಪಾಸ್ ಮಾಡಿರಬೇಕು.
ಅಬಕಾರಿ ಪೇದೆ ಹುದ್ದೆಗೆ ವೇತನ ಶ್ರೇಣಿ ರೂ.21400-42000.
ಅಬಕಾರಿ ನಿರೀಕ್ಷಕರು ಹುದ್ದೆಗೆ ವೇತನ ಶ್ರೇಣಿ ರೂ.37900-70850.
ಹೊಸ ಮದ್ಯ ತಯಾರಿಕೆಗೆ ಉದ್ಯಮಿಗಳು ಮುಂದೆ ಬಂದರೆ ಮುಖ್ಯಮಂತ್ರಿಗಳ ಜತೆ ಚರ್ಚಿಸಿ ಅನುಮೋದನೆ ನೀಡುತ್ತೇವೆ. ಇದರಿಂದ ರಾಜ್ಯದಲ್ಲಿ ಉದ್ಯೋಗ ಸೃಜನೆ ಹೆಚ್ಚಾಗುತ್ತದೆ ಎಂದು ಅವರು ಹೇಳಿದ್ದಾರೆ. ಹಳ್ಳಿಗಳ ಸಣ್ಣಪುಟ್ಟ ಅಂಗಡಿಗಳಲ್ಲಿ ಮದ್ಯ ಮಾರಾಟವಾಗುತ್ತಿರುವ ಬಗ್ಗೆ ದೂರುಗಳಿವೆ. ಕೆಲ ಶಾಸಕರು ಕೂಡ ಈ ವಿಷಯ ಗಮನಕ್ಕೆ ತಂದಿದ್ದಾರೆ. ಇದರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸುವುದಾಗಿ ಸಚಿವರು ತಿಳಿಸಿದ್ದಾರೆ.