ಸಮಗ್ರ ನ್ಯೂಸ್: ಮಂಗಳೂರು ಪೊಲೀಸ್ ಕಮಿಷನರೆಟ್ ವ್ಯಾಪ್ತಿಯಲ್ಲಿ ಪಿಜಿಗಳಿಗೆ ಸಂಬಂಧಿಸಿದ ನಿಯಮಗಳನ್ನು ಬಿಗಿಗೊಳಿಸಲು ಪೊಲೀಸರು ಮುಂದಾಗಿದ್ದು, ಶೀಘ್ರದಲ್ಲಿ ಸಮಗ್ರ ನಿಯಮಾವಳಿ ರೂಪುಗೊಳ್ಳುವ ಸಾಧ್ಯತೆ ಇದೆ.
ಪಿಜಿ ಆರಂಭಿಸಲು ಸ್ಥಳೀಯಾಡಳಿತ ಸಂಸ್ಥೆಗಳ ಪರವಾನಿಗೆ ಹಾಗೂ ಪೊಲೀಸ್ ಆಯುಕ್ತರ ಕಚೇರಿಯಿಂದಲೂ ನಿರಾಕ್ಷೇಪಣ ಪತ್ರ (ಎನ್‌ಒಸಿ) ಪಡೆಯುವುದು ಮತ್ತು ಪಿಜಿ ನಿವಾಸಿಗಳಿಗೆ ಪೊಲೀಸ್ ದೃಢೀಕರಣ ಪ್ರಮಾಣಪತ್ರ (ಪಿಸಿಸಿ)ವನ್ನು ಕಡ್ಡಾಯ ಮಾಡಲಾಗುತ್ತಿದೆ.
ಜತೆಗೆ ಸ್ಥಳೀಯ ಆಗುಹೋಗುಗಳ ಮೇಲೆ ಸಾರ್ವಜನಿಕರು ನಿಗಾ ಇಡುವಂತಹ “ನೇಬರ್‌ಹುಡ್ ವಾಚ್’ ಪರಿಕಲ್ಪನೆಯನ್ನೂ ಜಾರಿಗೊಳಿಸಲು ಪೊಲೀಸರು ಮುಂದಾಗಿದ್ದಾರೆ.
ಮಂಗಳೂರಿನಲ್ಲಿ ನ.19ರಂದು ಸಂಭವಿಸಿದ ಕುಕ್ಕರ್ ಬಾಂಬ್ ಸ್ಫೋಟದ ಆರೋಪಿ ಮಹಮ್ಮದ್ ಶಾರೀಕ್ ಮೈಸೂರಿನಲ್ಲಿ ನಕಲಿ ಗುರುತು ಚೀಟಿ ನೀಡಿ ಬಾಡಿಗೆಗೆ ಮನೆ ಪಡೆದುಕೊಂಡಿದ್ದ. ಅನಂತರ ಮೈಸೂರಿನಲ್ಲಿ ಬಾಡಿಗೆ ಮನೆ ಪಡೆಯಲು ಪೊಲೀಸ್ ಕ್ಲಿಯರೆನ್ಸ್ ಸರ್ಟಿಫಿಕೇಟ್ ಕಡ್ಡಾಯಗೊಳಿಸಲಾಗಿತ್ತು. ಈಗಾಗಲೇ ಹಲವು ನಗರಗಳಲ್ಲಿ ಇಂತಹ ಬಿಗಿ ನಿಯಮ ಜಾರಿಗೊಳಿಸಲಾಗಿದ್ದು, ಶೀಘ್ರದಲ್ಲೇ ಮಂಗಳೂರು ಕೂಡಾ ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲಿದೆ.