ಸಮಗ್ರ ನ್ಯೂಸ್ : ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾಷಷ್ಠಿಯಂದು ವ್ಯಾಪಾರ ಮಾಡುತ್ತಿದ್ದ ಯುವಕನಲ್ಲಿ ಹಣಕ್ಕೆ ಪೀಡಿಸಿದ್ದಲ್ಲದೆ ಪೊಲೀಸ್ ವಸತಿಗೃಹಕ್ಕೆ ಕರೆದೊಯ್ದು ಚಿತ್ರಹಿಂಸೆ ನೀಡಿದ್ದಾರೆಂಬ ಆರೋಪದಲ್ಲಿ ಸುಬ್ರಹ್ಮಣ್ಯ ಠಾಣೆಯಲ್ಲಿ ಪೊಲೀಸ್ ಸಿಬ್ಬಂದಿ ವಿರುದ್ಧ ದೂರು ದಾಖಲಾಗಿದೆ.
ಕಡಬ ತಾಲೂಕಿನ ಕುಟ್ರಾಪಾಡಿ ಗ್ರಾಮದ ಭೀಮಗುಂಡಿ ಶಶಿಕಿರಣ್ (19) ಅವರು ಸುಬ್ರಹ್ಮಣ್ಯ ಠಾಣೆಯ ಪೊಲೀಸ್ ಸಿಬ್ಬಂದಿ ಭೀಮಣ್ಣ ಗೌಡ ವಿರುದ್ದ ದೂರು ನೀಡಿದ್ದಾರೆ. ಪಂಚಮಿ ದಿನವಾದ ನವೆಂಬರ್ 28ರಂದು ವ್ಯಾಪಾರ ನಡೆಸುತ್ತಿದ್ದಾಗ ರಾತ್ರಿ 11.30ರ ವೇಳೆಗೆ ಸ್ಟಾಲ್‌ಗೆ ಬಂದ ಭೀಮಣ್ಣ ಗೌಡ 5 ಸಾವಿರ ರೂ. ನೀಡುವಂತೆ ಒತ್ತಾಯಿಸಿದ್ದಾರೆ. ಅಲ್ಲದೆ ಅವಾಚ್ಯವಾಗಿ ಬೈದು ಅಂಗಡಿಯಲ್ಲಿದ್ದ ವಸ್ತುಗಳನ್ನು ಠಾಣೆಗೆ ಕೊಂಡೊಯ್ಯುವಂತೆ ಸೂಸಚಿಸಿದರು. ಆ ಬಳಿಕ ಅವೆಲ್ಲವನ್ನು ಪೊಲೀಸ್ ವಸತಿಗೃಹಕ್ಕೆ ಕೊಂಡೊಯ್ದು ಅಲ್ಲಿ ನನ್ನ ಮೊಬೈಲ್, ಹಣ ಕಿತ್ತುಕೊಂಡು ಸೊಂಟಕ್ಕೆ ತುಳಿದು ಚಿತ್ರಹಿಂಸೆ ನೀಡಿ ಬೆದರಿಕೆಯೊಡ್ಡಿದ್ದಾರೆ.
ಇದರಿಂದ ನಾನು ತೀವ್ರ ಆಘಾತಕ್ಕೊಳಗಾಗಿ ಆರೋಗ್ಯದಲ್ಲಿ ಏರುಪೇರುಂಟಾಗಿದೆ. ಬಳಿಕ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡೆ. ಆದರೆ ಪೊಲೀಸರ ಭಯದಿಂದಾಗಿ ದೂರು ನೀಡಲು ಮುಂದಾಗಲಿಲ್ಲ. ಇದೀಗ ಗೆಳೆಯರು ನೀಡಿದ ಸಲಹೆ ಮೇರೆಗೆ ಪೊಲೀಸರಿಗೆ ದೂರು ನೀಡಿದ್ದೇನೆ ಎಂಬುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ಶಶಿಕಿರಣ್ ನೀಡಿದ ದೂರಿನ ಆಧಾರದಲ್ಲಿ ಪೊಲೀಸ್ ಸಿಬ್ಬಂದಿ ಭೀಮಣ್ಣ ಗೌಡ ವಿರುದ್ದ ದೂರು ದಾಖಲಾಗಿದೆ. ಅಲ್ಲದೆ ಅವರನ್ನು ಕಡಬ ಠಾಣೆಗೆ ವರ್ಗಾವಣೆ ಮಾಡಿ ಆದೇಶಿಸಲಾಗಿದೆ ಎಂದು ತಿಳಿದು ಬಂದಿದೆ.