ಸುರತ್ಕಲ್: “ಚಿಕ್ಕಪೇಟೆ ಶಾಸಕರಾದ ಉದಯ್ ಗರುಡಾಚಾರ್ ರವರು ದೇವಸ್ಥಾನ ಮುಂಭಾಗ ವ್ಯಾಪಾರ ಮಾಡುವುದನ್ನು ವಿರೋಧಿಸುವ ಶಕ್ತಿಗಳಿಗೆ ಕಾನೂನು ರೀತಿಯಲ್ಲಿ ಸೂಕ್ತ ರೀತಿಯಲ್ಲಿ ಕ್ರಮ ಜರುಗಿಸಲಾಗುವುದು ಎಂಬ ಎಚ್ಚರಿಕೆಯನ್ನು ನೀಡಿದ್ದಾರೆ, ಈ ಮೂಲಕ ಸರ್ವ ಧರ್ಮೀಯರ ಸೌಹಾರ್ದತೆಯ ಸಂದೇಶವನ್ನು ಸಾರುವ ಮೂಲಕ ಕೋಮು ಸೌಹಾರ್ದತೆಯನ್ನು ಕೆಡವುವ ಶಕ್ತಿಗಳಿಗೆ ಸರಿಯಾಗಿ ಎಚ್ಚರಿಕೆಯನ್ನು ನೀಡಿದ್ದಾರೆ” ಎಂದು ಮಂಗಳೂರು ಉತ್ತರ ಕ್ಷೇತ್ರದ ಮಾಜಿ ಶಾಸಕ ಮೊಯಿದೀನ್ ಬಾವಾ ಹೇಳಿದ್ದಾರೆ.
“ಯಾವುದೇ ಶಕ್ತಿಗಳಿಗೆ ಹೆದರದೆ, ಹಿಂಜರಿಕೆ ತೋರದೆ ಪ್ರಜಾಪ್ರಭುತ್ವ ಸಂದೇಶವನ್ನು ಎತ್ತಿ ಹಿಡಿದಿದ್ದಾರೆ, ಬಿಜೆಪಿ ಪಕ್ಷದಲ್ಲಿ ಇಂತಹ ಬೆರಳೆಣಿಕೆಯಷ್ಟು ಶಾಸಕರು ಇದ್ದಾರೆ. ಆದರೆ ಕೆಲವು ಶಾಸಕರು ಉಸಿರುಗಟ್ಟಿ ಬಿಜೆಪಿ ಪಕ್ಷದಲ್ಲಿ ಹೊಂದಿಕೊಂಡು ಹೋಗುತ್ತಿದ್ದಾರೆ, ಸೌಹಾರ್ದತೆಯನ್ನು ಸಾರಲು ಅವರಿಗೆ ಮನಸ್ಸಿದ್ದರೂ ಕೂಡ ಪಕ್ಷದ ಸಿದ್ಧಾಂತ ಅವರಿಗೆ ಅವಕಾಶ ನೀಡುತ್ತಿಲ್ಲ, ರಾಜ್ಯದಲ್ಲಿ ಕೋಮು ಸೌಹಾರ್ದ ಕೆಡವುಲು ಯತ್ನಿಸುವ ಸಮಾಜಘಾತುಕ ಶಕ್ತಿಗಳಿಗೆ ಉದಯ್ ಗರುಡಾಚಾರ್ ನೀಡಿದ ಸಂದೇಶ ಅತ್ಯಗತ್ಯವಾಗಿದೆ, ಇಂತಹ ಸಂದೇಶ ರಾಜ್ಯವನ್ನು ಇನ್ನಷ್ಟು ಉತ್ತುಂಗದತ್ತ ಕೊಂಡಯ್ಯಬಹುದು, ಎಲ್ಲರೂ ಸಾಮರಸ್ಯವನ್ನು ಮೈ ಗೂಡಿಸಿಕೊಂಡು ಜೀವಿಸಿದರೆ ಸುಂದರ ಭಾರತವನ್ನು ಕಟ್ಟಬಹುದು” ಎಂದು ಬಾವಾ ಹೇಳಿದ್ದಾರೆ.