ಬೆಂಗಳೂರು: ಕೇರಳ ರಾಜ್ಯ ಸಾರಿಗೆ ಸಂಸ್ಥೆ ಮಾತ್ರ ಕೆ ಎಸ್ ಆರ್ ಟಿ ಸಿ ಲೋಗೋ ಮತ್ತು ಹೆಸರು ಬಳಸಬಹುದೆಂದು ಭಾರತ ಸರಕಾರದ ಟ್ರೇಡ್ಮಾರ್ಕ್ ರಿಜಿಸ್ಟ್ರಿ ಆದೇಶ ಹೊರಡಿಸಿದೆ. ಇದರಿಂದ ಕರ್ನಾಟಕ ಸಾರಿಗೆ ಸಂಸ್ಥೆ ಗೆ ಕೆಎಸ್ಆರ್ಟಿಸಿ ಹೆಸರು ಮತ್ತು ಲೋಗೋ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಕೇರಳ ಕೆಎಸ್ಆರ್ಟಿಸಿ ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದು, ಇನ್ನು ಕರ್ನಾಟಕ ಕೆಎಸ್ಆರ್ಟಿಸಿ ಅಧಿಕಾರಿಗಳು ನಮಗಿನ್ನೂ ಯಾವುದೇ ಮಾಹಿತಿ ಬಂದಿಲ್ಲ ಎಂದು ತಿಳಿಸಿದ್ದಾರೆ.
ಒಂದು ವೇಳೆ ಈ ಆದೇಶ ಅಧಿಕೃತವೇ ಆಗಿದ್ದರೆ ಕರ್ನಾಟಕ ಕೆಎಸ್ಆರ್ಟಿಸಿ ತನ್ನ ಹೆಸರು ಮತ್ತು ಲೋಗೋವನ್ನು ಸಂಪೂರ್ಣವಾಗಿ ಬದಲಿಸಿ ಕೊಳ್ಳಬೇಕಾಗುತ್ತದೆ. ಕೆಎಸ್ಸಾರ್ಟಿಸಿ ಹೆಸರು ಬಳಕೆ ಕುರಿತಂತೆ ಕಳೆದ 8 ವರ್ಷಗಳ ಹಿಂದೆ ಕರ್ನಾಟಕ ಮತ್ತು ಕೇರಳ ಸಾರಿಗೆ ಇಲಾಖೆ ನಡುವೆ ವಿವಾದ ಏರ್ಪಟ್ಟಿತ್ತು. ಎರಡೂ ರಾಜ್ಯದ ಸಾರಿಗೆ ಇಲಾಖೆಗಳು ತಮ್ಮ ಸಾರಿಗೆ ಸೇವೆಯನ್ನು ಕೆಎಸ್ಸಾರ್ಟಿಸಿ ಹೆಸರಿನಲ್ಲಿ ನಡೆಸುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಎರಡು ರಾಜ್ಯಗಳ ಸಾರಿಗೆ ಇಲಾಖೆಗಳಿಗೆ ಒಂದೇ ಹೆಸರಿರುವುದು ಸಾಕಷ್ಟು ಗೊಂದಲಗಳು ಉಂಟು ಮಾಡುತ್ತಿತ್ತು. ಹೀಗಾಗಿ ಕರ್ನಾಟಕ ಕೆಎಸ್ಸಾರ್ಟಿಸಿ ಹೆಸರನ್ನು ನೋಂದಣಿ ಮಾಡಿಕೊಡುವಂತೆ 2013 ಡಿಸೆಂಬರ್‌ನಲ್ಲಿ ಕೇಂದ್ರ ಸರ್ಕಾರದ ಟ್ರೇಡ್‌ಮಾರ್ಕ್ ರಿಜಿಸ್ಟ್ರಿಯಲ್ಲಿ ಅರ್ಜಿ ಸಲ್ಲಿಸಿತ್ತು. ಅದಕ್ಕೆ ವಿರೋಧ ವ್ಯಕ್ತಪಡಿಸಿದ್ದ ಕೇರಳ, ಮೈಸೂರು ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣವಾಗಿದ್ದೇ 1973ರಲ್ಲಿ, ಅದಕ್ಕೂ ಮುನ್ನವೇ ಕೇರಳದಲ್ಲಿ ಸಾರಿಗೆ ಸಂಸ್ಥೆಗೆ ಕೆಎಸ್ಸಾರ್ಟಿಸಿ ಎಂದು ಕರೆಯಲಾಗುತ್ತಿತ್ತು. ಹೀಗಾಗಿ ಆ ಹೆಸರಿನ ಬಳಕೆ ಅಧಿಕಾರವನ್ನು ಕೇರಳಕ್ಕೆ ನೀಡಬೇಕು ಎಂದು ವಾದಿಸಿತ್ತು. ಇದೀಗ ಕೇಂದ್ರ ಸರ್ಕಾರದ ಟ್ರೇಡ್‌ಮಾರ್ಕ್ ರಿಜಿಸ್ಟ್ರಿ ಕೆಎಸ್ಸಾರ್ಟಿಸಿ ಹೆಸರು ಬಳಕೆಗೆ ಕೇರಳಕ್ಕೆ ಅನುಮತಿಸಿದೆ. ಹೀಗಾಗಿ ಕರ್ನಾಟಕ ಸಾರಿಗೆ ಇಲಾಖೆಗೆ ಭಾರಿ ಹಿನ್ನಡೆಯಾಗುವಂತಾಗಿದೆ.