ಕಳೆದೆರಡು ವರ್ಷದಿಂದ ಕೊರೋನಾ ಮಹಾಮಾರಿ ಹಾವಳಿಯಲ್ಲಿ ಬೈಸಿಕಲ್‌ನ ಟ್ರಿಣ್ ಟ್ರಿಣ್ ಬೆಲ್ ಸದ್ದು ಜಗತ್ತಿನಾದ್ಯಂತ ಬಲು ಜೋರಾಗಿ ಕೇಳಿಸುತ್ತಿದೆ! ಸದೃಢ ಶ್ವಾಸಕೋಶ ಕೊರೋನಾ ವೈರಸ್ ಅನ್ನು ಹಿಮ್ಮೆಟ್ಟಿಸುತ್ತದೆ ಎನ್ನುವ ಸತ್ಯ ಗೊತ್ತಾಗುತ್ತಿದ್ದಂತೆ ಬಡವರು, ಶ್ರೀಮಂತರು ಎನ್ನುವ ಭೇದ ಬದಿಗಿಟ್ಟು ಜನತೆ ಬೈಸಿಕಲ್ ತುಳಿಯುತ್ತಿದ್ದಾರೆ.
ಸೈಕಲ್ ರೈಡ್ ವೈರಸ್ ಸೋಂಕಿಗೆ ಒಳಗಾಗುವ ಅಪಾಯವನ್ನು ಕಡಿಮೆ ಮಾಡುತ್ತದೆ. ರಕ್ತದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುತ್ತದೆ ಎನ್ನುತ್ತಾರೆ ತಜ್ಞರು. ಹಿಂದೆ ಮನೆಗಳಲ್ಲಿ ಎಲ್ಲಾ ವಯೋಮಾನದರು ಬಳಸುವ ಏಕೈಕ ಸಾಧನವಾಗಿದ್ದ ಸೈಕಲ್ ಸ್ಥಾನವನ್ನು ಬೈಕ್, ಸ್ಕೂಟರ್ ಮತ್ತು ಕಾರುಗಳು ತುಂಬಿದ್ದವು. ಆದರೆ, ಇದೀಗ ಕಳೆದ ಒಂದು ವರ್ಷದಿಂದ ಮತ್ತೊಮ್ಮೆ ಆ ದಿನಗಳು ಮರಳಿವೆ.
ದೈಹಿಕ ಫಿಟ್ನೆಸ್, ಮಾನಸಿಕ ಆರೋಗ್ಯ, ಹೃದಯ ಮತ್ತು ಆರೋಗ್ಯಕರ ಶ್ವಾಸಕೋಶ ಹೊಂದಿ ಕೊರೋನಾದಿಂದ ಪಾರಾಗಲು ಸಹಾಯವಾಗುತ್ತಿದೆ ಈ ಬೈಸಿಕಲ್. ಮನೆಯಿಂದಲೇ ಕೆಲಸ ಮಾಡುವವರು (ವರ್ಕ್ ಫ್ರಮ್ ಹೋಮ್ ) ಸೇರಿದಂತೆ ಪ್ರತಿ ತಿಂಗಳು ಲಕ್ಷ ಲಕ್ಷ ಗಳಿಸುವ ಟೆಕ್ಕಿಗಳು ಕೂಡ, ಉತ್ತಮ ಆರೋಗ್ಯಕ್ಕಾಗಿ ಸೈಕಲ್ ತುಳಿಯುತ್ತಿದ್ದಾರೆ. ದಿನವಿಡೀ ಲವಲವಿಕೆಯಿಂದ ಇರಲು ಈ ಸೈಕ್ಲಿಂಗ್ ಅತ್ಯುತ್ತಮ ವ್ಯಾಯಾಮ ಎನ್ನುವುದು ತಜ್ಞರ ಅಭಿಪ್ರಾಯ.
ಇದು ಉಸಿರಾಟದ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತದೆ. ಶ್ವಾಸಕೋಶವನ್ನು ಆರೋಗ್ಯವಾಗಿಡುತ್ತದೆ. ಇದರಿಂದ ಪಕ್ಕೆಲುಬು ಮತ್ತು ಡಯಾಫ್ರಾಮ್ ಸುತ್ತಲಿರುವ ಸ್ನಾಯುವಿನ ಶಕ್ತಿಯನ್ನು ಕಾಪಾಡಿಕೊಳ್ಳಲು ಸುಲಭ ಮಾರ್ಗ.
ದೇಹದ ಎಲ್ಲಾ ಸ್ನಾಯುಗಳಿಗೆ ಕಸುವು ನೀಡುವ ಕೆಲವು ಸರಳ ವ್ಯಾಯಾಮಗಳೆಂದರೆ ನಡಿಗೆ ಮತ್ತು ಸೈಕ್ಲಿಂಗ್. ಇದನ್ನು ಕಡಿಮೆ ಪ್ರಾಬಲ್ಯದ ಏರೋಬಿಕ್ ವ್ಯಾಯಾಮವೆಂದೂ ಕರೆಯುತ್ತಾರೆ.
ಕೊರೋನಾ ಲಾಕ್ಡೌನ್ ಪರಿಣಾಮ ಜನರಲ್ಲಿ ಆರೋಗ್ಯದ ಕಾಳಜಿ ಹೆಚ್ಚಾಗಿದೆ. ಲಾಕ್‌ಡೌನ್ ವೇಳೆ ಜಿಮ್, ಈಜುಕೊಳ ಬಂದ್ ಆಗಿದ್ದರಿಂದ ಬೆಳ್ಳಂ ಬೆಳಿಗ್ಗೆ ಎದ್ದು ಸೈಕಲ್ ತುಳಿಯುತ್ತಿದ್ದಾರೆ. ವರ್ಕ್ ಫ್ರಂ ಹೋಮ್ ಪ್ರವೃತ್ತಿಯಿಂದಾಗಿ ಬೇಸತ್ತವರು ಇದೀಗ ಸೈಕಲ್ ಮೊರೆ ಹೋಗಿದ್ದಾರೆ
ಎರಡು ಚಕ್ರಗಳ ವಾಹನವನ್ನು ಇಂಗ್ಲಿಷಿನಲ್ಲಿ ಬೈ-ಸೈಕಲ್ ಎನ್ನುತ್ತಾರೆ. ಬೈಸಿಕಲ್ ಮಕ್ಕಳ ಮೊದಲ ವಾಹನ. 19ನೇ ಶತಮಾನದ ಕೊನೆಯಲ್ಲಿ ಬೈಸಿಕಲ್ ಭಾರತಕ್ಕೆ ಬಂದ ಹೊಸದರಲ್ಲಿ ಅದನ್ನು ಕನ್ನಡಿಗರು ‘ಬೀಸೆಕಲ್ಲು’ ಎಂದು ಕರೆಯುತ್ತಿದ್ದರು. ಅಂದಿಗೆ ಅದು ನವನಾಗರಿಕತೆಯ ಸಂಕೇತವಾಗಿತ್ತು. ‘ಸೈಕಲ್ ಬಡವರ ಸಾರಿಗೆ’ ಎಂಬ ಅಭಿಪ್ರಾಯ ಈಗಲೂ ಜನಜನಿತ.