ಸಮಗ್ರ ನ್ಯೂಸ್: ವಿಶ್ವದ ಅತಿದೊಡ್ಡ ತಂಪು ಪಾನೀಯವನ್ನು ಜನರಿಗೆ ಪರಿಚಯಿಸಿದ್ದ ರಸ್ನಾ ಗ್ರೂಪ್‌ನ ಸ್ಥಾಪಕ ಆರೀಝ್ ಪಿರೋಜ್ಶಾ ಖಂಬಟ್ಟಾ(85) ಅವರು ಇಂದು ವಿಧಿವಶರಾಗಿದ್ದಾರೆ.
ಆರೀಝ್ ಅವರು ಭಾರತೀಯ ಕೈಗಾರಿಕೆ, ವ್ಯಾಪಾರ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸಾಮಾಜಿಕ ಅಭಿವೃದ್ಧಿಗೆ ಅಪಾರ ಕೊಡುಗೆ ನೀಡಿದ್ದಾರೆ. ಅವರು ವಾಪಿಝ್ (ವರ್ಲ್ಡ್ ಅಲೈಯನ್ಸ್ ಆಫ್ ಪಾರ್ಸಿ ಇರಾನಿ ಜರ್ತೋಸ್ಟಿಸ್) ನ ಮಾಜಿ ಅಧ್ಯಕ್ಷರಾಗಿ ಮತ್ತು ಅಹಮದಾಬಾದ್ ಪಾರ್ಸಿ ಪಂಚಾಯತ್ ನ ಹಿಂದಿನ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ತಂಪು ಪಾನೀಯಗಳಲ್ಲಿ ಆರೀಝ್ ಅವರ ಬ್ರಾಂಡ್ ರಸ್ನಾ ತುಂಬಾನೇ ಹೆಸರುವಾಸಿಯಾಗಿದ್ದು, ಇದು ದೇಶದ 1.8 ಮಿಲಿಯನ್ ಚಿಲ್ಲರೆ ಮಾರಾಟ ಮಳಿಗೆಗಳಲ್ಲಿ ಮಾರಾಟವಾಗುತ್ತದೆ. 1970ರಲ್ಲಿ ಕೈಗೆಟಕುವ ದರದಲ್ಲಿ ಅಝೀಝ್ ಅವರು ರಸ್ನಾ ತಂಪು ಪಾನೀಯವನ್ನು ಮಾರುಕಟ್ಟೆಗೆ ಪರಿಚಯಿಸಿದ್ದರು.
5 ರೂ. ಮೊತ್ತದ ಒಂದು ಪ್ಯಾಕೇಟ್ ರಸ್ನಾದಿಂದ ಸುಮಾರು 32 ಗ್ಲಾಸ್ ತಂಪು ಪಾನೀಯ ತಯಾರಿಸಬಹುದಾಗಿತ್ತು. ಈ ಬೆಳವಣಿಗೆಯ ನಂತರ ‘ಐ ಲವ್ ಯೂ ರಸ್ನಾ’ ಎಂಬ ಧ್ಯೇಯದೊಂದಿಗೆ 80ರ ದಶಕದಲ್ಲಿ ಮಾರುಕಟ್ಟೆಯಲ್ಲಿ ದೊಡ್ಡ ಮಟ್ಟದ ಅಭಿಯಾನ ಆರಂಭಿಸಿದ್ದ ರಸ್ನಾ ಇಂದಿಗೂ ಮಾರುಕಟ್ಟೆಯಲ್ಲಿ ಜನಪ್ರಿಯತೆ ಉಳಿಸಿಕೊಂಡಿದೆ. ಮಕ್ಕಳಿಗೆ ತುಂಬಾ ಪ್ರಿಯವಾಗುವ ರಸ್ನಾ ತಂಪು ಪಾನೀಯ ಹಣ್ಣುಗಳ ರುಚಿಯೊಂದಿಗೆ ನ್ಯೂಟ್ರೀಷಿಯನನ್ನು ಪೂರೈಸುತ್ತದೆ.